ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯಾದರೆ ಅದಕ್ಕೆ ಗೌರವ ತಂದಂತಾಗುತ್ತದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಚೈತ್ರೋತ್ಸವ, ಫಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28ರವರೆಗೆ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಮೈಸೂರು ಉದ್ಯಾನ ಕಲಾ ಸಂಘ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಜ.26 ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ರವರು ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಆಕರ್ಷಣೆಯಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿಸ್ಮಯ ಪ್ರಪಂಚ ಪುಷ್ಪ ಕಲಾಕೃತಿಗಳ ಪ್ರದರ್ಶನ, ಹೂಗಳಿಂದ ಅಲಂಕೃತಗೊಂಡ ತೇಜಸ್ವಿ ಪ್ರತಿಷ್ಠಾನ, ಸ್ಕೂಟರ್, ಇತರೆ ಕಲಾಕೃತಿಗಳ ನಿರ್ಮಾಣ, ಸಿರಿ ಧಾನ್ಯಗಳಿಂದ ಅಲಂಕೃತಗೊಂಡ ತೇಜಸ್ವಿ, ಕುವೆಂಪುರವರ ಕಲಾಕೃತಿಗಳು ಜನರ ಅಚ್ಚರಿಗೆ ಕಾರಣವಾಗಲಿದೆ ಎಂದರು.
ಅಲಂಕಾರಿಕ ಗಿಡಗಳು, ಆಂಥೋರಿಯಂ. ಟೋರೇನಿಯಾ, ಸೇವಂತಿಗೆ, ಚೆಂಡುಹೂ, ಪೆಟೋನಿಯಾ, ಸಾಲ್ವಿಯ, ಕ್ಯಾಲುಂಡುಲಾ, ಗಝೇನಿಯಾ, ಡೇಲಿಯ ಸೇರಿದಂತೆ 9 ಸಾವಿರ ವಿವಿಧ ಬಣ್ಣ ಬಣ್ಣದ ಹೂಕುಂಡಗಳು, ವಿವಿಧ ಸಾಹಿತಿಗಳು, ಕ್ರೀಡಾಪಟುಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರು, ಇತರೆ ಕಲಾವಿದರ ತರಕಾರಿ ಕೆತ್ತನೆಯ ಪ್ರದರ್ಶನ ಇರಲಿದೆ ಎಂದರು.
ತೆಂಗಿನ ಗರಿಗಳಿಂದ ಅಲಂಕೃತಗೊಂಡ ಜಾನೂರು ಆರ್ಟ್, ಬಾಳೇಕಂದು ಮತ್ತು ಕೃಷಿ ತ್ಯಾಜ್ಯ ಬಳಸಿ ಥಾಯ್ ಆರ್ಟ್ ನಿರ್ಮಾಣ, ಜಿಲ್ಲೆಯ ಎಲ್ಲಾ ರೈತರು ಬೆಳೆದಿರುವ ಬಾಳೆ, ಹಲಸು, ಸುವರ್ಣಗೆಡ್ಡೆ, ಗೆಣಸು, ಕಲರ್ ಕ್ಯಾಪ್ಸಿಕಂ, ಕುಂಬಳಕಾಯಿ ವಿವಿಧ ತರಕಾರಿ, ಅಡಿಕೆ, ತಾಳೆ ಮತ್ತಿತರ ಸಾಂಬಾರ ಪದಾರ್ಥಗಳ ಪ್ರದರ್ಶನವಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತೋಟಗಾರಿಕೆ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಾಗುವುದು. 26 ವಿವಿಧ ಆಹಾರ ಮಳಿಗೆಗೆಗಳು, ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಜ.28 ರಂದು 11.30ಕ್ಕೆ ಫಲಪಾಕ ಸ್ಪರ್ಧೆಯಲ್ಲಿ ಸಾರ್ವಜನಿಕರು ಮನೆಯಲ್ಲಿ ಉತ್ತಮವಾಗಿ ತಯಾರಿಸಿಕೊಂಡು ಬಂದಿರುವ ಖಾದ್ಯಗಳಿಗೆ ಪ್ರಥಮ ಬಹುಮಾನ 5 ಸಾವಿರ ರೂ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ರೂ ನೀಡಲಾಗುವುದೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಸಿರಿಧಾನ್ಯ ಬಳಸಿ ಅಂಬೇಡ್ಕರ್ ಪುತ್ಥಳಿ, ತರಕಾರಿ ಬಳಸಿ ಸಂಸತ್ ಭವನ ಕಲಾಕೃತಿ, ಆರೋಗ್ಯ ಇಲಾಖೆಯಿಂದ ತಾಯಿಮಗು ಪರಿಕಲ್ಪನೆಯ ಸಿರಿಧಾನ್ಯ ಕಲಾಕೃತಿ, ಕೃಷಿ ಇಲಾಖೆಯಿಂದ ಸಿರಿಧಾನ್ಯ ರಾಶಿ, ರಂಗೋಲಿ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ ಅಲಂಕಾರಿ ಮೀನುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ರೇಷ್ಮೆ ಇಲಾಖೆಯಿಂದ ರೇಷ್ಮೆಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷತೆ, ಪಶುಸಂಗೋಪನ ಇಲಾಖೆಯಿಂದ ಜ.27 ರಂದು ಮಧ್ಯಾಹ್ನ 2.30 ಕ್ಕೆ ಶ್ವಾನ ಪ್ರದರ್ಶನ, ಅದೇ ದಿನ ಲಕ್ಷ್ಮಿ ಮುಗುಳಿದೇವಮ್ಮ ಅವರಿಂದ ಜಾನಪದ ಗೀತಗಾಯನ, ಪ್ರವಾಸೋದ್ಯಮ ಇಲಾಖೆಯಿಂದ 3 ದಿನಗಳ ಕಾಲ ಹಾಟ್ ಏರ್ ಬಲೂನ್ ರೈಡಿಂಗ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.28 ರಂದು ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮ ಉಪಸ್ಥಿತರಿದ್ದರು.



