ಭಾರತ ದೇಶದಲ್ಲಿ ಹಿಂದೂ ರಾಷ್ಟ್ರದ ಹೊಸ ಸಂವಿಧಾನ ತರುತ್ತೇವೆಂದು ಹೇಳಿರುವವರೆಲ್ಲರೂ ಸಂವಿಧಾನ ವಿರೋಧಿಗಳು. ಈ ದೇಶದ ಸಂವಿಧಾನ ಒಪ್ಪಿಕೊಳ್ಳದ ದೇಶದ್ರೋಹಿಗಳು ದೇಶ ಬಿಟ್ಟು ತೊಲಗಿ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 76ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶದ ಸಮವಿಧಾನದ ಮೇಲೆ ದಾಳಿ, ಟೀಕೆ, ವಿರೋಧ ಹೆಚ್ಚಾಗಲಾರಂಭಿಸಿದೆ. ಈ ಹಿಂದೆ ಕೇಂದ್ರದ ಮಂತ್ರಿಗಳು, ಹೈಕೋರ್ಟ್‍ನ ಕೆಲ ನ್ಯಾಯಾಧೀಶರು, ಮಠದ ಸ್ವಾಮೀಜಿಗಳು ಸಂವಿಧಾನದ ಬಗ್ಗೆ ವಿರೋಧ, ಟೀಕೆ ಮಾಡಿರುವುದು ಈದೇಶದ ದೊಡ್ಡ ದುರಂತ. ಕೇಂದ್ರ ಮಂತ್ರಿ ಅಮಿತ್‍ಷಾ ಅವರ ಹೇಳಿಕೆಯಿಂದ ದೇಶಾಧ್ಯಂತ ಪ್ರತಿರೋಧ ವ್ಯಕ್ತವಾಗಿದ್ದರಿಂದ ಈ ವಿಚಾರ ಮರೆ ಮಾಚಿಸಲು ಬಿಜೆಪಿಯವರು ಸಂವಿಧಾನ ಸಂಗಮ ಕಾರ್ಯಕ್ರಮ ರೂಪಿಸಿ ಅದಕ್ಕೆ ದಲಿತ ನಾಯಕರ ನೇತೃತ್ವದಲ್ಲಿ ಚಾಲನೆ ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದ ಹೆಸರಿನಲ್ಲಿ ದಲಿತ ಯುವಕರನ್ನು ಸೆಳೆಯುವ ತಂತ್ರ ರೂಪಿಸುತ್ತಿದ್ದಾರೆ. ಇವರ ತಂತ್ರಕ್ಕೆ ಯಾರೋ ಸಿಲುಕಬಾರದೆಂದು ಮನವಿ ಮಾಡಿದರು.
ಸ್ವತಂತ್ರವಾಗಿ ಲಿಖಿತ ಸಂವಿಧಾನದ ಆಧಾರದ ಮೇಲೆ ಆಡಳಿತ ನಡೆಸುವ ಪ್ರತಿಯೊಂದು ದೇಶ ಗಣರಾಜ್ಯೋತ್ಸವ ಆಚರಿಸುತ್ತದೆ. ಆದರೆ ಪ್ರತಿ ವರ್ಷವೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸದೇ ಸಂವಿಧಾನದ ಬಗ್ಗೆ ಮರೆ ಮಾಚುವ ಕೆಲಸ ಆಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಸಂವಿಧಾನದ ಮೇಲೆ ಇನ್ನಷ್ಟು ಟೀಕೆ, ವಿರೋಧ ವ್ಯಕ್ತವಾಗುವ ಅಪಾಯವಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ನಮ್ಮ ಪಕ್ಷದ ವತಿಯಿಂದ ಜಾಗೃತಿ ಮೂಡಿಸುವ ಆಂದೋಲನ ನಡೆಸಲಾಗುವುದು ಎಂದ ಅವರು, ನಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶೇಖರ್ ಬಿ.ಹೊಸಳ್ಳಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರು ಪಕ್ಷದ ಹೆಸರಿನಲ್ಲಿ ಯಾವುದೇ ಕಾರ್ಯ ನಡೆಸಿದರೂ ಅದಕ್ಕೆ ಪಕ್ಷ ಜವಾಬ್ದಾರರಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಉಪಸ್ಥಿತರಿದ್ದರು.



