ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ದಿನದ ದಿನಕ್ಕೆ ಬಾಗಿಲು ಮುಚುತಿದ್ದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಬಹುತೇಕ ಕಡೆ ಬಂದಾಗುತ್ತಿವೆ ಮತ್ತೆ ಕೆಲವು ಕಡೆ ಶಾಲೆ ನಡೆಯುತ್ತಿದ್ದರು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಇಂಥ ಸನ್ನಿವೇಶದಲ್ಲಿ ಸರ್ಕಾರಿ ಶಾಲೆಗೆ ನವರೋಪ ನೀಡಲು ಗ್ರಾಮೀಣ ಯುವಕರ ತಂಡವೊಂದು ಸಜ್ಜಾಗಿದೆ.
ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಕರು ಸೇರಿ ಸಂಘಟಿಸಿರುವ “ಗ್ರಾಮದ ಹುಡುಗರು” ವಾಟ್ಸಪ್ ಗ್ರೂಪ್ ತಂಡವು ಇದೀಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ನವರೂಪ ನೀಡಲು ಮುಂದಾಗಿದೆ.
ಶಾಲೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕರ್ಷಿತವಾಗಬೇಕಾದರೆ ಶಾಲೆಯ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ ಈ ಹಿನ್ನೆಲೆಯಲ್ಲಿ ಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವಿಶಿಷ್ಟವಾದ ಚಿತ್ರಕಲೆಗಳೊಂದಿಗೆ ಗೋಡೆಗಳನ್ನು ಸಿಂಗರಿಸಿ ಶಾಲೆಗೆ ಆಕರ್ಷಕ ರೂಪ ನೀಡಲು ಮುಂದಾಗಿದ್ದಾರೆ.
ಪ್ರವೀಣ್ ಬೈದುವಳ್ಳಿ ನೇತೃತ್ವದ ಗ್ರಾಮದ ಹುಡುಗರು ವಾಟ್ಸಾಪ್ ಗ್ರೂಪ್ ಸದಸ್ಯರ ಈ ಕಾರ್ಯಕ್ಕೆ ಜಿಲ್ಲಾಡಳಿತ, ಕರ್ಣಾಟ ಬಲ ಸೇನೆ, ಪರಿಸರ ಪರಿವಾರ, ಗ್ರೀನ್ ಫೋರ್ಸ್, ದರ್ಪಣ ಪತ್ರಿಕೆ, ವಿಶ್ವಮಾನ್ಯ ಪತ್ರಿಕೆ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಎಂ.ಡಿ. ಕ್ರಿಯೇಷನ್ಸ್, ನನ್ ಮಿನಿ ರೆಡಿಯೋ, ಶಾಲೆಯ ಹಳೇವಿದ್ಯಾರ್ಥಿಗಳು, ಗ್ರಾಮಪಂಚಾಯಿತಿ, ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.
ರಾಜ್ಯದ ಹೆಸರಾಂತ ವರ್ಣಚಿತ್ರ ಕಲಾವಿದ ಯಲ್ಲಪ್ಪ ವೈ ಕುಂಬಾರ ಅವರ ತಂಡ ಎರಡು ದಿನಗಳ ಕಾಲ ಗ್ರಾಮದಲ್ಲಿ ಇದ್ದು, ಶಾಲೆಯ ಗೋಡೆ ಮತ್ತು ಕಾಂಪೌಂಡ್ ಗಳ ಮೇಲೆ ಆಕರ್ಷಕ ವರ್ಣಚಿತ್ರಗಳನ್ನು ಮೂಡಿಸಲಿದ್ದಾರೆ.
ನಮ್ಮೂರ ಸರ್ಕಾರಿ ಕನ್ನಡ ಶಾಲೆ ಉಳಿಸೋಣ ಬನ್ನಿ ಎಂಬ ಕರೆಯೊಂದಿಗೆ ಗ್ರಾಮೀಣ ಪ್ರದೇಶದ ಯುವಕರು ಸರ್ಕಾರಿ ಶಾಲೆಗಳ ಕಡೆ ಮುತುವರ್ಜಿ ತೋರುತ್ತಿರುವುದು ಗಮನಾರ್ಹವಾಗಿದೆ. ಈ ಕಾರ್ಯಕ್ಕೆ ಸರ್ವರ ಸಹಕಾರವನ್ನು ಕೋರಿದ್ದಾರೆ.



