ಉದ್ಯಮಿಯೊಬ್ಬರು ತೋರಿದ ಕಾಳಜಿಯಿಂದ ಸರ್ಕಾರಿ ಶಾಲೆಯೊಂದು ಮಾದರಿಯಾಗಿ ಕಂಗೊಳಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸದ್ಯ ಜಿಲ್ಲೆಯ ಇತರ ಸರಕಾರಿ ಶಾಲೆಗಳಿಗೆ ಮಾದರಿಯಾಗಿದೆ.
ಕಾಫಿ ಉದ್ಯಮಿ, ಪ್ರಸಿದ್ಧ ಮುದ್ರಮನೆ ಕಾಫಿ ಕ್ಯೂರರ್ಸ್ ಮಾಲೀಕ ಬಿ.ಎಸ್. ಸಂತೋಷ್ ಅವರು ತೋರಿದ ಮುತುವರ್ಜಿಯಿಂದ , ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದಾಗಿ ಈ ಶಾಲೆ ಇಂದು ರಾಜ್ಯದ ಒಂದು ಮಾದರಿ ಸರ್ಕಾರಿ ಶಾಲೆಯಾಗಿ ಪರಿವರ್ತನೆ ಹೊಂದಿದೆ.
ಸುಸಜ್ಜಿತ ಶಾಲಾ ಕೊಠಡಿಗಳೂ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಹಾಗೂ ಗುಣಮಟ್ಟದ ಶಿಕ್ಷಣದಿಂದಾಗಿ ಸುತ್ತಲ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ನಾ ಮುಂದು ತಾ ಮುಂದು ಎಂದು ಬರುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಮುತ್ತಿಗೆಪುರ ಶಾಲೆ ಮೊದಲಿನಿಂದಲೂ ತಾಲ್ಲೂಕಿನ ಉತ್ತಮ ಶಾಲೆಗಳಲ್ಲಿ ಒಂದೆಂದೂ ಗುರುತಿಸಿಕೊಂಡಿತ್ತು. ಈ ಶಾಲೆಯ ಹಿರಿಮೆಗೆ ತಿರುವು ನೀಡಿದ್ದು ಈಗ್ಗೆ ನಾಲ್ಕೈದು ವರ್ಷಗಳಿಂದ. ಶಾಲೆಗೆ ಸಮೀಪದಲ್ಲಿಯೇ ಇರುವ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕ ಬಿ.ಎಸ್. ಸಂತೋಷ್ ಅವರು ತಮ್ಮ ಮಗನನ್ನು ಒಂದನೇ ತರಗತಿಗೆ ಈ ಶಾಲೆಗೆ ಸೇರಿಸಿದರು. ತಾನೂ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು, ತಮ್ಮ ಮಗನೂ ಸರ್ಕಾರಿ ಶಾಲೆಯಲ್ಲಿ ಓದಬೇಕು, ಸರ್ಕಾರಿ ಶಾಲೆಗಳು ಉಳಿಯಬೇಕು, ಕನ್ನಡ ಭಾಷೆಯನ್ನು ಮಕ್ಕಳು ಚೆನ್ನಾಗಿ ಕಲಿಯಬೇಕು ಎಂಬ ಹೆಬ್ಬಯಕೆಯಿಂದ ಅವರು ತಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದರು.

ಮಗನನ್ನು ಶಾಲೆಗೆ ಸೇರಿಸಿ ಮುಂದೆ ಆ ಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂತೋಷ್ ಅವರು ಮುತುವರ್ಜಿ ವಹಿಸತೊಡಗಿದರು. ಆರಂಭದಲ್ಲಿ ಸುಮಾರು 18 ಲಕ್ಷ ವೆಚ್ಚದಲ್ಲಿ ಶಾಲೆಯ ಮುಂಭಾಗದಲ್ಲಿ ಪ್ರಾರ್ಥನಾ ಸಭಾಂಗಣವನ್ನು ಕಟ್ಟಿಸಿಕೊಟ್ಟರು. ಶಾಲೆಗೆ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ ಕೊಠಡಿಗಳ ಕೊರತೆ ಎದುರಾಗಿತ್ತು. ಆಗ ಸಂತೋಷ್ ಅವರೇ ಖುದ್ದಾಗಿ ಸ್ಥಳೀಯ ಶಾಸಕರ ಗಮನ ಸೆಳೆದು ಶಾಲೆಗೆ ಹೆಚ್ಚುವರಿ ಕೊಠಡಿಗಳ ಮಂಜೂರು ಮಾಡಿಸಲು ಮುತುವರ್ಜಿ ವಹಿಸಿದರು. ತಾವೇ ಸ್ವತಃ ಸುಮಾರು ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಶಾಲೆಗೆ ಸುಸಜ್ಜಿತವಾದ 8 ತರಗತಿ ಕೊಠಡಿಗಳುಳ್ಳ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.
ತಾವು ಮಾಡುವ ಸಮಾಜಮುಖಿ ಕಾರ್ಯಗಳಿಗೆ ಎಂದಿಗೂ ಪ್ರಚಾರ ಬಯಸದೇ ಕೆಲಸ ಮಾಡುವ ಸಂತೋಷ್ ಅವರು ಕೇವಲ ಶಾಲೆಗೆ ಅನುದಾನ ಕೊಟ್ಟಿರುವುದಲ್ಲದೇ ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಪ್ರತಿದಿನ ಶಾಲೆಗೆ ಭೇಟಿ ನೀಡಿ ಅಲ್ಲಿನ ಆಗುಹೋಗುಗಳನ್ನು ವಿಚಾರಿಸುವುದು, ಶಾಲೆ ಕಟ್ಟಡದ ಕಾಮಗಾರಿಯನ್ನು ಸ್ವತಃ ತಾವೇ ಪರಿಶೀಲಿಸಿ ಗುಣಮಟ್ಟದ ಕೆಲಸ ಆಗುವಂತೆ ಮುತುವರ್ಜಿ ವಹಿಸುತ್ತಿದ್ದಾರೆ. ಸುಸಜ್ಜಿತವಾದ ಕಟ್ಟಡವೀಗ ಉದ್ಘಾಟನೆಗೆ ಸಿದ್ದವಾಗಿದ್ದು, ಫೆಬ್ರುವರಿ 28 ರಂದು ರಾಜ್ಯದ ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಕಟ್ಟಡವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ.
1973ರಲ್ಲಿ ಕೆಲವೇ ಕೆಲ ಮಕ್ಕಳೊಂದಿಗೆ ಆರಂಭವಾದ ಮುತ್ತಿಗೆಪುರ ಸರಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಸದ್ಯ 363 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದಾಗಿದೆ. 50 ವರ್ಷಗಳನ್ನು ಪೂರೈಸಿರುವ ಈ ಸರಕಾರಿ ಶಾಲೆ ಹಿಂದಿನಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಶಾಲೆಯಾಗಿದೆ.
ಮುತ್ತಿಗೆಪುರ ಸರಕಾರಿ ಶಾಲೆಗೆ ಸರಕಾರದ ವಿವೇಕಾ ಯೋಜನೆಯಡಿ 4 ಕೊಠಡಿಗಳ ನಿರ್ಮಾಣಕ್ಕೆ 56 ಲಕ್ಷ ರೂ. ಮಂಜೂರಾಗಿದ್ದು, ವಿವೇಕಾ ಯೋಜನೆಯ ಅನುದಾನ ಹಾಗೂ ಉದ್ಯಮಿ ಸಂತೋಷ್ ಅವರು ನೀಡಿರುವ 2.18 ಕೋ. ರೂ. ವೆಚ್ಚದಲ್ಲಿ ಒಟ್ಟು 12 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. 12 ಕೊಠಡಿಗಳಿರುವ ಆಕರ್ಷಕ ಶೈಲಿಯ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.

ಶಾಲೆಯಲ್ಲಿ 12 ಶಿಕ್ಷಕರ ಹುದ್ದೆಗಳಿದ್ದು, 4 ಖಾಯಂ ಶಿಕ್ಷಕರ ಕೊರತೆಯ ಮಧ್ಯೆಯೂ ಶಿಕ್ಷಕರ ಪರಿಶ್ರಮದಿಂದಾಗಿ ಪ್ರತೀ ವರ್ಷ ಈ ಶಾಲೆ ಶೇ.100 ಫಲಿತಾಂಶ ಪಡೆಯುತ್ತಾ ಸಾಧನೆ ಮಾಡುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿನ ದಾಖಲಾತಿ ಈಗಾಗಲೇ ಭರ್ತಿಯಾಗಿರುವುದು ಈ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಮುತ್ತಿಗೆಪುರ ಸರಕಾರಿ ಶಾಲೆ ಆಕರ್ಷಣೆಯ ಕೇಂದ್ರವಾಗುತ್ತಿರುವುದರ ಹಿಂದೆ ಈ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಧು ಕುಮಾರ್ ಹಾಗೂ 8 ಸದಸ್ಯರು ಮತ್ತು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಭಾರತಿ, ದೈಹಿಕ ಶಿಕ್ಷಕ ಸುರೇಶ್ ಮತ್ತು ಇತರ ಶಿಕ್ಷಕರ ಪರಿಶ್ರಮ, ಈ ಹಿಂದೆ ಇಲ್ಲಿ ಮುಖ್ಯಶಿಕ್ಷಕರು, ಸಹಶಿಕ್ಷಕರಾಗಿ ಕೆಲಸ ಮಾಡಿದವರ ಪ್ರಯತ್ನ ಸಹ ಕಾರಣವಾಗಿದೆ.
ಶಾಲೆಗೆ ಸೌದಿ ಅರೇಬಿಯಾದಲ್ಲಿರುವ ಮೂಡಿಗೆರೆ ಮೂಲದ ಉದ್ಯಮಿ ಸಿದ್ದೀಕ್ ಎಂಬವರು 60 ಸಾವಿರ ರೂ. ವೆಚ್ಚದ ಶುದ್ಧ ಕುಡಿಯುವ ನೀರಿ ಘಟಕವನ್ನು ದಾನ ನೀಡಿದ್ದರೆ, ಶೆರ್ಲಿನ್ ವಿಲಿಯಮ್ಸ್ ಎಂಬ ಕಂಪೆನಿ 18 ಲಕ್ಷ ರೂ. ವೆಚ್ಚದಲ್ಲಿ ಪೀಠೋಪಕರಣಗಳನ್ನು ನೀಡಿದ್ದರೆ, ಯೂತ್ ಫಾರ್ ಸೇವಾ ಸಂಸ್ಥೆ 8 ಗಣಕಯಂತ್ರಗಳು ಹಾಗೂ ಕಂಪ್ಯೂಟರ್ ಟೇಬಲ್ಗಳನ್ನು ದಾನ ಮಾಡಿದೆ. ರಾಣಾ ಪ್ರತಾಪ್ ಮತ್ತು ಜಿ.ಎಂ.ಮೋಹನ್ ಗೌಡಹಳ್ಳಿ ಅವರ ನೇತೃತ್ವದ ಉಜಿರೆ ರತ್ನಮಾನಸ ವಿದ್ಯಾರ್ಥಿ ನಿಲಯದ ಹಳೇವಿದ್ಯಾರ್ಥಿಗಳ ತಂಡ ಶಾಲೆಗೆ ಕಂಪ್ಯೂಟರ್ ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದೆ. ಇದರೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಸ್ಪೋಕನ್ ಇಂಗ್ಲಿಷ್ ಶಿಕ್ಷಣವೂ ಸಿಗುವಂತಹ ವ್ಯವಸ್ಥೆಯನ್ನು ಎಸ್ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಮಾಡಿದ್ದಾರೆ.
ಈ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಎಲ್ಕೆಜಿ, ಯುಕೆಜಿ ಶಿಕ್ಷಣವೂ ಬಡ ಮಕ್ಕಳಿಗೆ ಸಿಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನೂ ನಡೆಸಲಾಗುತ್ತಿದೆ. ಶಾಲೆಯ ಆವರಣ, ಕೊಠಡಿಗಳು ಸೇರಿ 20 ಸಿಸಿಟಿವಿ ಕ್ಯಾಮರಾ ಅಳವಡಿಸಲು ದಾನಿಗಳು ಮುಂದೆ ಬಂದಿದ್ದಾರೆ. ಮೈಕ್ ಹಾಗೂ ಸ್ಪೀಕರ್ಗಳ ಮೂಲಕ ಮಕ್ಕಳಿಗೆ, ಶಿಕ್ಷಕರಿಗೆ ಸಂದೇಶ, ಮಾಹಿತಿ ನೀಡುವ ವ್ಯವಸ್ಥೆ ಶಾಲೆಯಲ್ಲಿದ್ದು, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗಾಗಿ ಸ್ಕೂಲ್ ಬಸ್ನ ವ್ಯವಸ್ಥೆಗೂ ದಾನಿಗಳು ನೆರವು ನೀಡಲು ಮುಂದಾಗಿದ್ದಾರೆ.

ಉತ್ತಮ ಶಾಲೆ ಪ್ರಶಸ್ತಿ, ಸ್ವಚ್ಛ ಶಾಲೆ ಪ್ರಶಸ್ತಿ, ಅಕ್ಷರ ದಾಸೋಹ ಉತ್ತಮ ನಿರ್ವಹಣೆ ಪ್ರಶಸ್ತಿ, ಉತ್ತಮ ಎಸ್ಡಿಎಂಸಿ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ (ಈ ಹಿಂದೆ ಮುಖ್ಯಶಿಕ್ಷಕರಾಗಿದ್ದ ರೇಣುಕಾ ಟೀಚರ್), ಹಸಿರು ಶಾಲೆ ಪ್ರಶಸ್ತಿ ಯಂತಹ ಹಲವು ಪ್ರಶಸ್ತಿಗಳನ್ನು ಈ ಶಾಲೆ ತನ್ನ ಮುಡಿಗೇರಿಸಿಕೊಂಡಿದೆ.
ಕ್ರೀಡಾಕೂಟಗಳಲ್ಲೂ ಈ ಶಾಲೆಯ ಮಕ್ಕಳು ಸಾಧನೆ ಮಾಡಿದ್ದಾರೆ. ಇಬ್ಬರು ಮಕ್ಕಳು 100 ಮೀ. ಓಟದ ಸ್ಫರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರೆ, ಶಾಲೆಯ ಹಳೆಯ ವಿದ್ಯಾರ್ಥಿನಿ ದೀಪ್ತಿ ಎಂಬವರು ರಾಷ್ಟ್ರಮಟ್ಟದಲ್ಲಿ ನಡೆದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ಮಹಿಳೆಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಒಟ್ಟಾರೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ ಉದ್ಯಮಿ ಬಿ.ಎಸ್. ಸಂತೋಷ್ ಅವರು ತೋರಿದ ಕಾಳಜಿಯಿಂದ ಪೋಷಕರ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿಯವರ ಮುತುವರ್ಜಿಯಿಂದ ನಮ್ಮ ಸರ್ಕಾರಿ ಶಾಲೆಗಳು ಹೇಗೆ ಕಂಗೊಳಿಸಬಹುದು ಎಂಬುದಕ್ಕೆ ಮುತ್ತಿಗೆಪುರ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಮಾದರಿ ನಿದರ್ಶನವಾಗಿದೆ.




