oplus_0
ಕೇಂದ್ರ ಸರಕಾರ ವಕ್ಫ್ ಮಸೂದೆ ಜಾರಿ ಮಾಡುವ ಮೂಲಕ ದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ದ್ರೂಹವಾಗಿದೆ. ಕೂಡಲೇ ಕೇಂದ್ರ ಸರಕಾರ ವಕ್ಫ್ ಮಸೂದೆ ತಿದ್ದುಪಡಿ ಹಿಂಪಡೆಯಬೇಕೆಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ವಕ್ಫ್ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಅದರ ಭಾಗವಾಗಿ ಈ ವಕ್ಫ್ ಮಸೂದೆ ತಿದ್ದುಪಡಿ ಕೂಡ ಒಂದಾಗಿದೆ. ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ಸಂಪ್ರದಾಯವನ್ನು ನಿರ್ವಹಿಸುವ ಮೂಲಕ ಎಲ್ಲಾ ಧರ್ಮದ ಜನರೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ನಮ್ಮ ಹಕ್ಕನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳುವ ಪ್ರಯತ್ನ ನಡೆಸಿದರೆ ಇದಕ್ಕೆ ಮುಸ್ಲಿಂ ಸಮುದಾಯ ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಜದೀದ್ ಮಸೀದಿ ಮೌಲಾನ ವಾಜೀದ್ ಅಲಿ ಮಾತನಾಡಿ, ಮುಸ್ಲಿಂ ಸಮುದಾಯದ ಪೂರ್ವಿಕರು ನಮ್ಮ ಸಮುದಾಯ ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನದಿಂದ ಬದುಕುವ ಉದ್ದೇಶ ಹಾಗೂ ನಮ್ಮ ಧರ್ಮದ ಆಚಾರ, ವಿಚಾರಗಳಿಗೆ ಅವಶ್ಯಕತೆಗಾಗಿ ದೇವರ ಹೆಸರಿನಲ್ಲಿ ಕೊಟ್ಟ ಜಾಗಕ್ಕೆ ವಕ್ಫ್ ಎನ್ನುತ್ತಾರೆ. ಈ ಸಂಸ್ಕøತಿ ಕೇವಲ ಮುಸ್ಲಿಂ ಮಾತ್ರವಲ್ಲ. ಹಿಂದೂ, ಕ್ರಿಶ್ಚಿಯನ್, ಭೌದ ಧರ್ಮದಲ್ಲೂ ಹಿಂದಿನಿಂದ ನಡೆದುಕೊಂಡು ಬಂದಿದೆ.. ಆದರೆ ಶತಮಾನಗಳಿಂದಲೂ ತಮ್ಮ ಧರ್ಮ, ಆಚಾರ, ವಿಚಾರಗಳ ಮೂಲಕ ಜೀವನ ನಡೆಸುತ್ತಿರುವ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿರುವುದು ಸರಿಯಲ್ಲ. ನಮ್ಮ ಆಸ್ತಿ ಕೊತ್ತುಕೊಳ್ಳುವ ಪ್ರಯತ್ನ ಕೈ ಬಿಡಬೇಕು. ಯಾವುದೇ ಧರ್ಮಕ್ಕೆ ದಕ್ಕೆ ತರುವ ಕೆಲಸ ಯಾರಿಂದಲೂ ಆಗಬಾರದೆಂದು ಆಗ್ರಹಿಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಜಾಮಿಯಾ ಮಸೀದಿ ಮೌಲಾನ ಸೈಯದ್ ಇಜಾಝ್ ಅಹಮ್ಮದ್, ಚಕಮಕ್ಕಿ ಖಲಂದರಿಯಾ ಸಂಸ್ಥೆಯ ಸಿನಾನ್ ಫೈಝಿ, ಇಕ್ಬಾಲ್ ಮೌಲಾನ ಕಿತ್ತಲೆಗಂಡಿ, ವಕೀಲ ರಿಜ್ವಾನ್ ಅಲಿ, ಜಿಯಾವುಲ್ಲಾ, ಅಲ್ತಾಫ್ ಬಿಳಗುಳ ಮತ್ತಿತರರಿದ್ದರು.
ಬೃಹತ್ ಸಂಖ್ಯೆಯಲ್ಲಿ ಮುಸ್ಲೀಂ ಸಮುದಾಯದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



