ಏಪ್ರಿಲ್ 14ರಂದು ರಾಜ್ಯ ಸರಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡಬೇಕೆಂದು ಛಲವಾದಿ ಮಹಾಸಭಾದ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ ಒತ್ತಾಯಿಸಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂಬೇಡ್ಕರ್, ಬಸವಣ್ಣ, ಕೆಂಪೇಗೌಡ ಸೇರಿದಂತೆ ಅನೇಕ ಮಹನೀಯರ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ಆದರೆ ಮಹನೀಯರಿಗೆ ತನ್ನದೇ ಆದ ಚಿಂತನೆ, ವ್ಯಕ್ತಿತ್ವ, ಗೌರವವಿರುತ್ತದೆ. ಎಲ್ಲಾ ಮಹನೀಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಅವರ ಆದರ್ಶ ಜೀವನ ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕಿದೆ. ಏಪ್ರಿಲ್ 14ರಂದು ನಡೆಯುವ ಅಂಬೇಡ್ಕರ್ ಜಯಂತಿ ಜತೆಗೆ ಬಾಬು ಜಗಜೀವನ್‍ರಾಮ್ ಅವರ ಜಯಂತಿ, ಒಂದೇ ದಿನ ಆಚರಿಸಲು ಸರಕಾರ ಮುಂದಾಗಿದೆ. ಈ ಕ್ರಮ ಸರಿಯಲ್ಲ. ಹಾಗೇನಾದರೂ ಒಂದೇ ನಡೆಸಿದರೆ ಅದೇ ದಿನ ಕಪ್ಪು ಪಟ್ಟಿ ಧರಿಸಿ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಗರೀಕ ವೇದಿಕೆ ಒಕ್ಕೂಟದ ಮುಖಂಡ ರಾಘವೇಂದ್ರ ಚಿನ್ನಗ ಮಾತನಾಡಿ, ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಎಲ್ಲಾ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಜತೆಗೆ ಎಲ್ಲರೂ ಶಾಂತಿಯುತವಾಗಿ ಜೀವನ ನಡೆಸಲು ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದ ಜನರು ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕೆಂದ ಅವರು, ಮೂಡಿಗೆರೆ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪಿಸಿ ತೆರವುಗೊಳಿಸುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಳಿಕ ತೆರವುಗೊಳಿಸಿದ ವ್ಯಕ್ತಿಗಳು ಮತ್ತೆ ಪುತ್ಥಳಿ ನಿರ್ಮಾಣ ಮಾಡುತ್ತೇವೆಂದವರು ನಾಪತ್ತೆಯಾಗಿದ್ದಾರೆ. ಕೂಡಲೇ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾಗಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.



