30 ದಿನ ಉಪವಾಸ ವ್ರತಾಚರಣೆ ನಂತರ ಮುಸ್ಲಿಮರು ಸೋಮವಾರ ಪವಿತ್ರ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯಲ್ಲಿರುವ ಈದ್ಗಾ ಮೈದಾನಕ್ಕೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ತಂಡೋಪ ತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದ ಜನ ಅಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಎಚ್.ಡಿ.ತಮ್ಮಯ್ಯ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿ, 6ನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಪೈಗಂಬರರು ಇಸ್ಲಾಂ ಧರ್ಮದ ಗುರುಗಳಾಗಿ ಬಡವರ ಪರವಾದ ಕಾಳಜಿ ಹೊಂದಿ ಅವರ ಪರ ದನಿ ಎತ್ತಿದ್ದಾರೆ.
ಮೆಕ್ಕಾದಿಂದ ಮದೀನಕ್ಕೆ ಹೋಗುವ ಮಧ್ಯೆ ಅವರು ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಪೈಗಂಬರರು ದೊಡ್ಡ ಕುಟುಂಬದಲ್ಲಿ ಬೆಳೆದವರು. ಮೆಕ್ಕಾದಿಂದ ಮದೀನಕ್ಕೆ ಹೋಗುವಾಗ ಪೈಗಂಬರರು ತುಂಬಾ ಕಷ್ಟ ಅನುಭವಿಸುತ್ತಾರೆ. ಅವರಿಗೆ ಗೌರವದ ಸಲ್ಲಿಸುವ ಸಲುವಾಗಿ ಸಮುದಾಯದ ಜನ ಒಂದು ತಿಂಗಳು ಉಪವಾಸ ಅಚರಿಸುತ್ತಾರೆ ಎಂದರು.
ಆರನೇ ಶತನಾನದಲ್ಲಿ ಜನಿಸಿದ ಮಹಮದ್ ಪೈಗಂಬರರು ಮತ್ತು 12ನೇ ಶತಮಾನದಲ್ಲಿ ಜನಿಸಿದ ಬಸವಣ್ಣ ಅವರಿಬ್ಬರ ದ್ಯೇಯವು ಒಂದೇ ಆಗಿದೆ. ಇಬ್ಬರೂ ಮಹಾಪುರುಷರು ಕೂಡ ಬಡವರ ಮತ್ತು ಶೋಷಿತರ ಪರವಾದ ಕಾಳಜಿ ಉಳ್ಳವರಾಗಿದ್ದಾರೆ. ಅವರ ಮಾರ್ಗದರ್ಶನದಂತೆಯೇ ರಂಜಾನ್ ದಿನ ಉಳ್ಳವರು ಬಡವರಿಗೆ ಏನಾದರೂ ದಾನ ನೀಡುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹ್ಮದ್, ಸಮುದಾಯದ ಜನರಿಗೆ ಶುಭಾಶಯ ಕೋರಿ ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.
ನಗರದ ಜಾಮೀಯಾ ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳ ಧರ್ಮಗುರುಗಳು ಈದ್ಗಾ ಮೈದಾನದಲ್ಲಿ ಮುಂಚೂಣಿ ಸ್ಥಾನದಲ್ಲಿ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಪ್ರತಿ ವರ್ಷ ಭಾಗವಹಿಸುತ್ತಿದ್ದ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ಮಸೂದೆ ತಿದ್ದುಪಡಿಯನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ, ಪ್ರಾರ್ಥನೆಗೆ ಆಗಮಿಸಿದ್ದ ಎಲ್ಲಾ ಮುಸಲ್ಮಾನ ಬಾಂಧವರು ತಮ್ಮ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು.

ಮೂಡಿಗೆರೆ ತಾಲ್ಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಬದ್ರಿಯಾ, ಜುಮ್ಮಾ ಮಸೀದಿ, ಹ್ಯಾಂಡ್‍ಪೋಸ್ಟ್, ಅರಳೀಗಂಡಿ, ಬಿಳಗುಳ, ಅಣಜೂರು, ಕಿತ್ತಲೇಗಂಡಿ, ಹಂಡುಗುಳಿ, ಅಣಜೂರು, ಚಕಮಕ್ಕಿ, ಬಣಕಲ್, ಕೊಟ್ಟಿಗೆಹಾರ ಸೇರಿದಂತೆ ತಾಲೂಕಿನ 18 ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೇ ಮೂಡಿಗೆರೆ ಕಬರ ಸ್ಥಾನಕ್ಕೆ ಎಲ್ಲಾ ಮುಸ್ಲಿಮರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು, ಹೋಬಳಿ ಮತ್ತು ಗ್ರಾಮಾಂತರ ಪ್ರದೇಶಗಳ ಕಬರ ಸ್ಥಾನ ಮತ್ತು ಮಸೀದಿಗಳಲ್ಲಿ ಮುಸ್ಲಿಂಮರು ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.



