gold theft1

 

 

ದಾವಣಗೆರೆ ಜಿಲ್ಲೆಯ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ)ನಲ್ಲಿ ನಡೆದಿದ್ದ ರಾಜ್ಯದ ಅತಿ ದೊಡ್ಡ ಚಿನ್ನ ಕಳ್ಳತನ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದು,  ತಮಿಳುನಾಡಿನ ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದ ಸುಮಾರು 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ಕಳೆದ 6 ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಸೇರಿ 6 ಜನರನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಮದುರೈ ಮೂಲದ, ಹಾಲಿ ನ್ಯಾಮತಿಯಲ್ಲಿ ವಿಐಪಿ ಬ್ಲ್ಯಾಕ್ಸ್ ಅಂಡ್ ಸ್ವೀಟ್ಸ್ ಬೇಕರಿ ನಡೆಸುತ್ತಿದ್ದ ವಿಜಯಕುಮಾರ (30), ಆತನ ಸಹೋದರ ಅಜಯಕುಮಾರ (28), ಸಂಬಂಧಿ ಪರಮಾನಂದ (30),   ಪೇಂಟಿಂಗ್ ಕೆಲಸಗಾರ ಅಭಿಷೇಕ್ (23) ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು.

ಏನಿದು ಪ್ರಕರಣ?

2024ರ ಅಕ್ಟೋಬರ್ 28ರಂದು ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ   ಲೂಟಿಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್ ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿ, ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಮಾತ್ರ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಬ್ಯಾಂಕ್ ಬಲಭಾಗದ ಕಬ್ಬಿಣದ ಕಿಟಕಿ ಗ್ರಿಲ್ ತುಂಡರಿಸಿ ಒಳನುಸುಳಿದ್ದ ದರೋಡೆಕೋರರು, ಸಿಸಿಟಿವಿ, ಅಲರಾಂ, ಎಲ್ಲ ವೈರ್‌ಗಳ ಸಂಪರ್ಕ ತೆಗೆದು ಹಾಕಿ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಸ್ಟ್ರಾಂಗ್ ರೂಂಗೆ ಇದ್ದ ಗ್ರಿಲ್ ಡೋರ್ ಬೀಗ ಮುರಿದು ಹಾಕಿದ್ದರು. ಒಂದು ಸುಳಿವನ್ನೂ ಬಿಟ್ಟುಕೊಡದ ರೀತಿ ಈ ದರೋಡೆ ಎಸಗಲಾಗಿತ್ತು.

ಸುಳಿವು ನೀಡಿದ ಗ್ಯಾಸ್ ಸಿಲಿಂಡರ್

ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಆರೋಪಿಗಳಿಗಾಗಿ ದೇಶದ ಉದ್ದಗಲಕ್ಕೂ ಅಲೆದಾಡಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕರ್ನಾಟಕದ ಭದ್ರಾವತಿಯಲ್ಲಿ ಇದೇ ರೀತಿಯ ಬ್ಯಾಂಕ್ ದರೋಡೆ ನಡೆದಿದ್ದರಿಂದ ತನಿಖಾಧಿಕಾರಿಗಳು ಮೊದಲು ಅಂತರರಾಜ್ಯ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಇದರಂತೆ ಪೊಲೀಸರು ಉತ್ತರ ಪ್ರದೇಶದ ಒಂದು ಗ್ಯಾಂಗ್ ಬೆನ್ನಟ್ಟಿದರು, ಆದರೆ ನಂತರ ಆ ಗ್ಯಾಂಹಗ್ ಕೈವಾಡವಿಲ್ಲ ಎಂಬುದು ಖಚಿತವಾಗಿತ್ತು.

ಈ ನಡುವೆ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ ದರೋಡೆ ಪ್ರಕರಣ ಆರೋಪಿಗಳು ಆರೋಪಿಗಳು ಗ್ಯಾಸ್ ಕಟರ್ ಜತೆ ತಂದು, ಬಳಸಿದ ಬಳಿಕ ಕೆರೆಗೆ ಬಿಸಾಡಿದ್ದ ಸಿಲಿಂಡರ್‌ನಿಂದ ಸುಳಿವೊಂದನ್ನು ಪೊಲೀಸರಿಗೆ ಕೊಟ್ಟಿತ್ತು.

ಪ್ರಕರಣದ ಮೊದಲ ಆರೋಪಿ ವಿಜಯಕುಮಾರ್‌ಗ್ಯಾಸ್‌ ಕಟರ್ ಬಳಸಲು ಶಿವಮೊಗ್ಗದಲ್ಲಿ ಸಿಲಿಂಡರ್‌ ಖರೀದಿಸಿದ್ದ. ಈ ವೇಳೆ ಆಧಾರ್‌ಕಾರ್ಡ್ ಕೊಟ್ಟಿದ್ದ. ಆದರೆ, ಸಿಲಿಂಡರ್ ಅನ್ನು ವಾಪಸ್ ಕೊಟ್ಟಿರಲಿಲ್ಲ. ಬ್ಯಾಂಕ್ ದರೋಡೆ ಬಳಿಕ ಸಿಲಿಂಡರ್ ಅನ್ನು ನಜ್ಜುಗುಜ್ಜು ಮಾಡಿ ನೀರು ತುಂಬಿದ್ದ ಕೆರೆಗೆ ಎಸೆದಿದ್ದರು. ಬೇಸಿಗೆಯಿಂದಾಗಿ ಕೆರೆ ಒಣಗಿದ್ದರಿಂದ ಸಿಲಿಂಡರ್ ಪತ್ತೆಯಾಗಿತ್ತು.

ಬ್ಯಾಂಕ್ ದರೋಡೆಗಿಂತ ಹಿಂದಿನ ದಿನಗಳಲ್ಲಿ ಸಿಲಿಂಡರ್‌ ಖರೀದಿ ಮಾಡಿದವರು ಯಾರು ವಾಪಸ್‌ ಸಿಲಿಂಡರ್‌ ತಂದುಕೊಟ್ಟಿಲ್ಲ ಎಂದು ಮೂಲ ಹುಡುಕಿದಾಗ ವಿಜಯಕುಮಾರ್‌ ಸಿಲಿಂಡರ್‌ ವಾಪಸ್‌ ಕೊಡದಿರುವುದು ಪತ್ತೆಯಾಗಿದೆ. ಅಲ್ಲದೆ, ಶ್ವಾನ ದಳಗಳ ದಾರಿ ತಪ್ಪಿಸಲು ಅವರು ತಪ್ಪಿಸಿಕೊಳ್ಳುವ ಮಾರ್ಗದಲ್ಲಿ ಮೆಣಸಿನ ಪುಡಿಯನ್ನು ಎಸೆದಿದ್ದರು. ಈ ಖಾರದ ಪುಡಿ ಪ್ಯಾಕೇಟ್ ಮೇಲಿದ್ದ ಹೆಸರು ಸ್ಥಳೀಯರೇ ಕೃತ್ಯ ನಡೆಸಿದ್ದಾರೆಂಬ ಸುಳಿವು ನೀಡಿತ್ತು. ಬಳಿಕ ವಿಜಯಕುಮಾರ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಸಾಲ ನೀಡಲಿಲ್ಲ ಎಂಬ ಸಿಟ್ಟಿಗೆ ದರೋಡೆ

ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಎಸ್‌ಬಿಐನಿಂದ  14 ಲಕ್ಷ ಸಾಲ ಕೋರಿ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕಾರವಾಗಿತ್ತು. ಬಳಿಕ ತನ್ನ ಬಂಧುಗಳ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸಲಾಗಿತ್ತು. ಈ ಸಿಟ್ಟಿನಿಂದ ತನ್ನ ತಂಡದ ಜತೆಗೂಡಿ ದರೋಡೆ ನಡೆಸಿದ್ದಾನೆಂದು ತಿಳಿದುಬಂದಿದೆ.

ವೆಬ್ಸೀರಿಸ್‌ , ಯು ಟ್ಯೂಬ್ ನಿಂದ  ಪ್ರೇರಣೆ…!

ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು, ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ರ್ಆ. ರವಿಕಾಂತೇಗೌಡ ಅವರು ಕಳ್ಳತನ ಮತ್ತು ಚಿನ್ನ ಅಡಗಿಸಿಟ್ಟ ಕುತೂಹಲಕಾರಿ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಆರೋಪಿಗಳು ಬ್ಯಾಂಕ್ ದರೋಡೆಗೆ ಸಂಬಂಧಿಸಿದ ಪ್ರಸಿದ್ದ ವೆಬ್ ಸೀರೀಸ್ ಮನಿ ಹೈಸ್ಟ್ ಹಾಗೂ ಯುಟ್ಯೂಬ್ ವಿಡಿಯೋಗಳನ್ನು ನೋಡಿ 6 ತಿಂಗಳಿನಿಂದ ಸಿದ್ಧತೆ ನಡೆಸಿ ದರೋಡೆ ಮಾಡಿದ್ದಾರೆಂದು ತಿಳಿಸಿದ್ದಾರೆ.

ಚಿನ್ನವನ್ನು ಬಾವಿಯಲ್ಲಿ ಬಚ್ಚಿಟ್ಟಿದ್ದರು.

ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಚಿನ್ನವನ್ನು ವಿಜಯಕುಮಾರ ತನ್ನ ಮನೆಯಲ್ಲಿದ್ದ ಸಿಲ್ವರ್ ಬಣ್ಣದ ಡಸ್ಟರ್‌ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದನು. ಯಾವ ರೀತಿ ವಿಲೇವಾರಿ ಮಾಡಬೇಕೆಂದು ಪ್ಲಾನ್ ಮಾಡಿದ್ದನು. ಕೃತ್ಯಕ್ಕೆ ಬಳಸಿದ್ದ ಮಂಕಿ ಕ್ಯಾಪ್, ಹ್ಯಾಂಡ್ ಗೌಸ್‌ಗಳನ್ನು ನಾಶಪಡಿಸಿದ್ದನು. ಇನ್ನುಳಿದ ಹೈಡ್ರಾಲಿಕ್‌ ಕಟ‌ರ್, ಗ್ಯಾಸ್‌ ಸಿಲಿಂಡರ್‌ ಇತರೆ ವಸ್ತುಗಳನ್ನು ಸವಳಂಗ ಕೆರೆ ಎಸೆದಿದ್ದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆ.

ಬ್ಯಾಂಕ್ ನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಮೊದಲು ಕಲ್ಲಿನಿಂದ ಜಜ್ಜಿ ಹಾಳು ಮಾಡಿ, ಕೆರೆಗೆ ಎಸೆದಿದ್ದಾರೆ. ನಂತರ ವಿಜಯಕುಮಾರ್‌ ತನ್ನ ಸ್ವಂತ ಊರಾದ ತಮಿಳುನಾಡಿನ ಮದುರೈನ ಮನೆಗೆ ಒಬ್ಬನೇ ಕಾರಿನಲ್ಲಿ ಹೋಗಿದ್ದಾನೆ. ಮನೆಯು ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಲೂ ದಟ್ಟ ಅರಣ್ಯವಿದೆ. ಅಲ್ಲಿದ್ದ 25-30 ಅಡಿ ಆಳದ ಬಾವಿಗೆ ಒಂದು ಸಣ್ಣ ಲಾಕರ್‌ಗೆ ಚಿನ್ನ ತುಂಬಿ, ಅದಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಯಾರಿಗೂ ಕಾಣದಂತೆ ಇಳಿಬಿಟ್ಟು, ಬಚ್ಚಿಟ್ಟಿದ್ದಾನೆ.

ಪರಿಸ್ಥಿತಿ ತಿಳಿಗೊಂಡ ಬಳಿಕ ಸ್ವಲ್ಪ ಚಿನ್ನವನ್ನು ಹೊರತೆಗೆದು ತನ್ನ ಮತ್ತು ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದ್ದಾನೆ. ಕೆಲ ಚಿನ್ನವನ್ನು ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾನೆ. ನಂತರ ಇತರೆ ಆರೋಪಿಗಳಿಗೆ  ತಲಾ ರೂ.1 ಲಕ್ಷ ನೀಡಿದ್ದಾನೆ. ಗ್ರಾಮದಲ್ಲಿ ದೊಡ್ಡ ಮನೆ ಕಟ್ಟಿಸಿದ್ದಾನೆ. ಅಲ್ಲದೆ, ಕೆಲವು ಫ್ಲ್ಯಾಟ್ ಗಳನ್ನು ಖರೀಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಇನ್ನು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸರನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದು. 10 ಮಂದಿ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕವನ್ನು ನೀಡಲಾಗಿದೆ. ವಿಶೇಷ ಬಹುಮಾನವನ್ನೂ ಘೋಷಿಸಲಾಗಿದೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ