ಮೂಡಿಗೆರೆ ಹ್ಯಾಂಡ್‍ಪೋಸ್ಟ್ ನಿಂದ ಚಿಕ್ಕಮಗಳೂರು ಮೂಗ್ತಿಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರವಾಗಿ ಚಾಲನೆ ನೀಡಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಹಸಿರು ಸೇನೆ ಮುಖಂಡರು ಆಗ್ರಹಿಸಿದ್ದಾರೆ.
ಗುರುವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಘಟನೆಯ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ; ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿತಲೆ ಮಾಡುವ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ರೈತರು ತ್ವರಿತವಾಗಿ ಬೆಳೆ ಸಾಗಿಸಲು, ಅಲ್ಲದೇ ವಾಹನ ದಟ್ಟಣೆಯಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಪಡುತ್ತಿರುವ ಸಂಕಷ್ಟ ನಿವಾರಣೆಯಾಗಬೇಕೆಂದರೆ ರಸ್ತೆ ಅಗಲೀಕರಣ ಆಗಲೇಬೇಕು. ರಸ್ತೆ ಅಗಲೀಕರಣಕ್ಕಾಗಿ ಕಡಿತಲೆಗಾಗಿ 3122 ಮರ ಗುರುತಿಸಲಾಗಿದೆ. ಹೆದ್ದಾರಿ ಪ್ರಾಧಿಕಾರ ಮರ ತೆಗೆದ ಪ್ರದೇಶದಲ್ಲಿ ಹತ್ತತ್ತು ಗಿಡಗಳನ್ನು ಬೆಳೆಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್‍ಗೌಡ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ರಸ್ತೆ ಅಗಲೀಕರಣವಾಗಿದೆ. ಆದರೆ ಮೂಡಿಗೆರೆಯಲ್ಲಿ ಮಾತ್ರ ರಸ್ತೆ ಅಗಲೀಕರಣ ಭಾಗ್ಯ ಕಂಡಿಲ್ಲ. ಮೂಡಿಗೆರೆ ಪಟ್ಟಣದ ರಸ್ತೆಗಳು ಹದಗೆಟ್ಟು ಹೋಗಿವೆ. ವಾಹನ ನಿಲುಗಡೆಗೆ ಎಲ್ಲಿಯೂ ಜಾಗವಿಲ್ಲದಂತಾಗಿದೆ. ಪಟ್ಟಣದ ಕೆ.ಎಂ. ರಸ್ತೆ ಮತ್ತು ಎಂ.ಜಿ. ರಸ್ತೆಗಳನ್ನು ತುರ್ತಾರಿ ಅಗಲೀಕರಣ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇದರಿಂದ ಪ್ರತಿ ದಿನ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಈಗಾಗಲೇ ರಸ್ತೆ ಅಗಲೀಕರಣಕ್ಕೆ ಹೆದ್ದಾರಿ ಪ್ರಾಧಿಕಾರ ಶೇ.90ರಷ್ಟು ಪ್ರಕ್ರಿಯೆ ಮುಗಿಸಿದೆ. ಭೂ ಸ್ವಾಧೀನ ಹಾಗೂ ಮರಗಳ ಕಡಿತಲೆ ಬಾಕಿ ಇದ್ದು, ಈ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಸಾಗಬೇಕೆಂದು ಒತ್ತಾಯಿಸಿದರು.
ಉಪಾಧ್ಯಕ್ಷ ಸುಧೀರ್, ತಾಲೂಕು ಸಂಚಾಲಕ ರಾಮಚಂದ್ರೇಗೌಡ ಉಪಸ್ಥಿತರಿದ್ದರು.



