ರಾಜ್ಯ ಸರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 12 ನಮ್ಮ ಕ್ಲಿನಿಕ್ ಆರಂಭಿಸಿದ್ದು, ಜನರ ಆರೋಗ್ಯದ ಕಾಳಜಿಗೆ ಈ ಕ್ಲಿನಿಕ್ ಪೂರಕವಾಗಿದ್ದು, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ಮುದ್ರೆಮನೆ ಬಿಲ್ಡಿಂಗ್ ನಲ್ಲಿ ನೂತವಾಗಿ ಆರಂಭಗೊಂಡ ನಮ್ಮ ಕ್ಲಿನಿಕ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರ ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ರಾಜ್ಯಾಧ್ಯಂತ ನಮ್ಮ ಕ್ಲಿನಿಕ್ ಆರಂಭಿಸಿದೆ. ಇದೊಂದು ಉತ್ತಮವಾದ ಜನಪರವಾದ ಯೋಜನೆಯಾಗಿದೆ. ಅಲ್ಲದೇ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಸರಕಾರ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಕೂಡ ಸ್ಥಾಪಿಸಿದ್ದು, ತನ್ನ ಕ್ಷೇತ್ರದಲ್ಲೂ ಇಂದು ಸಂಚಾರಿ ಆರೋಗ್ಯ ಕ್ಲಿನಿಕ್‍ಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ನಮ್ಮ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಮಾಸಿಕ 63 ಸಾವಿರ ವೇತನ ನೀಡಲಾಗುತ್ತಿದೆ. ಇಂತಹ ಅನೇಕ ಜನಪರವಾದ ಯೋಜನೆಗಳು ಜಾರಿ ಮಾಡುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. ಸರಕಾರದಲ್ಲಿ ಹಣವಿಲ್ಲ ಎಂದು ಟೀಕೆ ಟಿಪ್ಪಣಿ ಮಾಡುವವರಿಗೆ ಸರಕಾರದಲ್ಲಿ ಹಣವಿದೆ ಎಂದು ಇಂತಹ ಹೊಸ ಯೋಜನೆಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಅನುಕುಮಾರ್, ಆಶಾ ಮೋಹನ್, ಮನೋಜ್‍ಕುಮಾರ್, ಕಮಲಾಕ್ಷಿ, ಸುಧೀರ್, ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ, ಡಿಎಚ್‍ಒ ಅಶ್ವಥ್‍ಬಾಬು, ಆರ್‍ಸಿಎಚ್ ಅಧಿಕಾರಿ ಡಾ.ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್‍ಬಾಬು, ಎನ್‍ವಿಬಿಡಿಸಿಪಿ ಅಧಿಕಾರಿ ಡಾ.ಬಾಲಕೃಷ್ಣ, ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪ್ರಿಯಾಂಕ ಮತ್ತಿತರರಿದ್ದರು. ಶ್ರೀಮತಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.



