ಕಾಯ, ವಾಚ, ಮನಸಾ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಸೇವೆ ಸಲ್ಲಿಸಿ ವೃತ್ತಿ ಇರುವುದೇ ಮಕ್ಕಳ ಅಭಿವೃದ್ಧಿಗಾಗಿ-ಶ್ರೇಯಸ್ಸಿಗಾಗಿ ಅನ್ನುವುದನ್ನು ಅರ್ಥಮಾಡಿಕೊಂಡು ಶ್ರಮವಹಿಸಿದರೆ ಮಕ್ಕಳಲ್ಲಿರುವ ಪ್ರತಿಭೆ ಸಹಕಾರಿ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಮಂಜುಳ.ಕೆ ಅಭಿಪ್ರಾಯಿಸಿದರು.
ಅವರು ಇಂದು ಜೆವಿಎಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಶಿಕ್ಷಣ ಕೊಡುವ ಜವಾಬ್ದಾರಿ ಕಾಲೇಜುಗಳಿಗಿದೆ. ವಿದ್ಯಾ ಪ್ರತಿಭೆ, ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳೂ ಸೇರಿದಂತೆ ಎಲ್ಲವೂ ಹೊರಬರಲು ಕಾರಣವಾಗಿ ಪ್ರತಿಭಾ ಶಕ್ತಿಯಾಗಿ ರೂಪುಗೊಳ್ಳುತ್ತದೆ, ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಕಳೆದ ಎರಡು ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ, ಕಲಾ, ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದು ಅತೀ ಹೆಚ್ಚು ಅಂಕ ಪಡೆದ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಪ್ರೋತ್ಸಾಹಧನದೊಂದಿಗೆ ಗೌರವಿಸುವ ಕೆಲಸವನ್ನು ಪ್ರಾಚಾರ್ಯರ ಸಂಘ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರಾಚಾರ್ಯರನ್ನು ಕರೆದು ಜಿಲ್ಲಾಮಟ್ಟದಲ್ಲಿ ಗೌರವಿಸುತ್ತಿರುವುದು ಅವರಿಗೆ ತೃಪ್ತಿ ನೀಡಿದೆ ಎಂದು ಭಾವಿಸುತ್ತೇನೆ, ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಸಮಾಜದ ಒಳಿತಿಗೆ ಈ ನಮ್ಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಕರು, ಉಪನ್ಯಾಸಕರು, ಪ್ರಾಚಾರ್ಯರು ಸನ್ನಡತೆಯಿಂದ ಸದ್ಗುಣ, ಸಹನೆಯಿಂದ ವರ್ತಿಸಿದರೆ ಸಮಾಜವೂ ಕಲಿಯುತ್ತದೆ ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ತಸ್ನೀಮಾ ಫಾತೀಮಾ ಮಾತನಾಡಿ, ಸಂಘದ ವತಿಯಿಂದ ಹಲವಾರು ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜವಾಬ್ದಾರಿ ಕರ್ತವ್ಯದ ಜೊತೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಚಿಂತನೆ ಮಾಡುವುದು ಅಗತ್ಯ ಎಂದರು.
ಸಂಘದ ಎಲ್ಲರ ಸಹಕಾರದೊಂದಿಗೆ ಬ್ಯಾಂಕಿನಲ್ಲಿ ಪ್ರತ್ಯೇಕ ಉಳಿತಾಯ ಖಾತೆ ತೆರೆದು 12 ಲಕ್ಷ ರೂ ನಿಶ್ಚಿತ ಠೇವಣಿಯನ್ನು ಇಡಲಾಗಿದ್ದು, ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಸಂಘದ ನಿವೇಶನ ಖರೀದಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ತೇಜಸ್ವಿನಿ.ಜಿ, ಖಜಾಂಚಿ ಎಚ್.ಎಂ.ನಾಗರಾಜರಾವ್, ರಾಜ್ಯ ಪ್ರಾಂಶುಪಾಲ ಸಂಘದ ಜಿಲ್ಲಾ ಪ್ರತಿನಿಧಿ ರವಿಕಾಂತ್, ಪ.ಪೂ.ಕಾ.ಪ್ರಾ.ಸಂ ಉಪಾಧ್ಯಕ್ಷರಾದ ವಿರೂಪಾಕ್ಷ.ಜಿ.ಬಿ, ಸೋಮಶೇಖರ್.ಎಂ.ಎಲ್, ಉಪಾಧ್ಯಕ್ಷ ಮಿನಿ ಥಾಮಸ್, ಸಹಕಾರ್ಯದರ್ಶಿ ನಾಗಮಣಿ, ಸ.ಪ.ಪೂ ಕಾಲೇಜು ಪ್ರಾಚಾರ್ಯರಾದ ಶಿವಕುಮಾರ್.ಕೆ.ಆರ್, ಜಯಪ್ಪ.ಸಿ.ಆರ್, ಪುಟ್ಟಸ್ವಾಮಿನಾಯ್ಕ್, ಭಾಗೀರಥಿ, ಭೂದೇಶ.ಕೆ.ಆರ್, ಅರುಣ್‌ಕುಮಾರ್.ಟಿ.ಆರ್, ಎಂ.ಆರ್.ಮುರಳೀಧರ, ಹೆಚ್.ಎಂ.ಸದಾಶಿವಯ್ಯ, ಅನಂತಪದ್ಮನಾಭ.ಎ.ಡಿ ಉಪಸ್ಥಿತರಿದ್ದರು.



