ಕಳಸ ತಾಲ್ಲೂಕಿನ ಕೊಳಮಗೆ ಎಂಬಲ್ಲಿ ಭದ್ರಾ ನದಿಗೆ ಪಿಕ್‌ಅಪ್ ವಾಹನ ಬಿದ್ದ ನಂತರ ಕಣ್ಮರೆ ಆಗಿದ್ದ ಯುವಕ ಶಮಂತ್ ಶವ 4 ದಿನಗಳ ನಂತರ ಪತ್ತೆಯಾಗಿದೆ.
ಕಳೆದ ಗುರುವಾರ ತಮ್ಮ ಪಿಕಪ್ ನಲ್ಲಿ ತೋಟದ ಕಾರ್ಮಿಕರನ್ನು ಕರೆತರಲು ತೆರಳುತ್ತಿದ್ದ ವೇಳೆ ಪಿಕಪ್ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಉರುಳಿ ಬಿದ್ದಿತ್ತು, ಈ ಘಟನೆಯಲ್ಲಿ ಶಮಂತ್ ಮೃತಪಟ್ಟಿರಬಹುದು ಎಂಬ ದುಃಖದಿಂದ ಅವರ ತಾಯಿ ರವಿಕಲಾ ಅವರೂ ಅದೇ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪಿಕಪ್ ವಾಹನ ಮರುದಿನವೇ ಭದ್ರಾ ನದಿಯಲ್ಲಿ ಪತ್ತೆಯಾಗಿತ್ತು. ಆದರೆ ಪಿಕಪ್ ಚಲಾಯಸುತ್ತಿದ್ದ ಶಮಂತ್ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಅಗ್ನಿಶಾಮಕ ತಂಡ, ಎನ್.ಡಿ.ಆರ್.ಎಫ್. ತಂಡ, ಆರೀಫ್ ಬಣಕಲ್ ಸ್ನೇಹಿತರು ಸೇರಿಂದತೆ ಸಮಾಜಸೇವಕರ ತಂಡ, ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ಶಮಂತ್ ಗಾಗಿ ಹುಡುಕಾಟ ನಡೆಸುತ್ತಿದ್ದರು.

ಸತತವಾದ ಹುಡುಕಾಟದ ನಂತರ ಇಂದು ಸೋಮವಾರ ಮಧ್ಯಾಹ್ನ ಸುಮಾರು 12.30 ಗಂಟೆಯ ಸಮಯದಲ್ಲಿ ಶಮಂತ್ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ಅನತಿ ದೂರದಲ್ಲಿಯೇ ಶಮಂತ್ ಶವ ನದಿತೀರದಲ್ಲಿ ಕಂಡುಬಂದಿದೆ. ಮೂಡಿಗೆರೆ ಅಗ್ನಿಶಾಮಕ ಠಾಣೆಯ ದೇವೇಂದ್ರಪ್ಪ , ಚಿಕ್ಕಮಗಳೂರು ಅಗ್ನಿಶಾಮಕ ಠಾಣೆಯ ಪ್ರವೀಣ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಶಮಂತ್ ಮೃತದೇಹವನ್ನು ನದಿಯಿಂದ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಕೋಟೆಹೊಳೆ ಸೇತುವೆಯ ಬಳಿಯಿಂದ ಶವವನ್ನು ಮೇಲಕ್ಕೆ ತರಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳಸ ಆಸುಪಾಸಿನ ಭದ್ರಾ ನದಿಯಲ್ಲಿ ಅಗ್ನಿಶಾಮಕ ದಳ, ಬಾಳೆಹೊಳೆ ಮತ್ತು ಹಳುವಳ್ಳಿ ಆಸುಪಾಸಿನಲ್ಲಿ ಎನ್‌ಡಿಆರ್‌ಎಫ್ ತಂಡ ಕಳೆದ ಮೂರು ದಿನಗಳಿಂ ಹುಡುಕಾಟ ನಡೆಸುತ್ತಿದ್ದರು.



