ತನ್ನ ಗಂಡನನ್ನು ಕೊಲೆ ಮಾಡಿಸಿ ನಾಪತ್ತೆ ನಾಟಕವಾಡಿದ್ದ ಪತ್ನಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಅನೈತಿಕ ಸಂಬಂಧದ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ಸ್ಕೆಚ್ ಹಾಕಿ ತನ್ನ ಗಂಡನನ್ನು ಪ್ರಿಯಕರನಿಂದ ಕೊಲೆ ಮಾಡಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಬಳಿಕ ಪತ್ನಿ ಮಾಡಿದ ಹತ್ಯೆಯ ಸಂಚನ್ನು ಕಡೂರು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆಯೇ ಮೂವರ ಬಂಧನವಾಗಿತ್ತು.
ಕಡೂರು ಪಟ್ಟಣದ ಕೋಟೆ ಬಡಾವಣೆಯ ನಿವಾಸಿ ಪತಿ ಸುಬ್ರಹ್ಮಣ್ಯ ಟೈಲರ್ ಕೆಲಸ ಮಾಡಿಕೊಂಡಿದ್ದರು. ಮೇ 31 ರಂದು ಅವರ ಕೊಲೆಯಾಗಿತ್ತು. ಇದೀಗ ಕೊಲೆ ನಡೆದು ಎರಡೂವರೆ ತಿಂಗಳ ನಂತರ ಅವರ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಸುಬ್ರಮಣ್ಯ ಅವರ ಪತ್ನಿ 55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್ ಮಧ್ಯೆ ಅನೈತಿಕ ಸಂಬಂಧ ಏರ್ಪಟ್ಟಿತ್ತು. ಈ ಅನೈತಿಕ ಸಂಬಂಧದ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ತನ್ನ ಗಂಡನ ಕೊಲೆಗೆ ಪತ್ನಿ ಸ್ಕೆಚ್ ಹಾಕಿದ್ದಳು. ಪ್ರದೀಪ್ ಜೊತೆಗಿನ ಅನೈತಿಕ ಸಂಬಂಧದ ಬಗ್ಗೆ ಇತ್ತ ಸುಬ್ರಹ್ಮಣ್ಯಗೂ ಅನುಮಾನ ಮೂಡಿತ್ತು ಎನ್ನಲಾಗಿದೆ. ಹೀಗಾಗಿ ಸುಬ್ರಹ್ಮಣ್ಯನನ್ನು ಹತ್ಯೆ ಮಾಡುವಂತೆ ಪ್ರದೀಪ್‌ಗೆ ಮೀನಾಕ್ಷಿ ತಿಳಿಸಿದ್ದಳು. ಅವಳ ಸೂಚನೆ ಮೇರೆಗೆ ಸ್ನೇಹಿತರ ಜೊತೆ ಸೇರಿ ಪ್ರದೀಪ್ ಹತ್ಯೆ ಮಾಡಿದ್ದ.
ಪ್ರಿಯಕರ ಪ್ರದೀಪ್‌ಗೆ ಮಾಹಿತಿ ನೀಡಿ ಹತ್ಯೆ ಮಾಡಿಸಿದ್ದ ಮೀನಾಕ್ಷಿ, ಜೂನ್ 2 ರಂದು ಗಂಡ ನಾಪತ್ತೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರದೀಪ್ ತಾಯಿಯ ಮೊಬೈಲ್ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಕಡೂರು ಪೊಲೀಸರ ನಿರಂತರ ತನಿಖೆಯಿಂದ ಜೂನ್ 8 ರಂದು ಆರೋಪಿಗಳಾದ ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬಾತನನ್ನು ಬಂಧಿಸಿದ್ದರು.
ಅನೈತಿಕ ಸಂಬಂಧಕ್ಕೆ ಅಡ್ಡಿ, ಹಣದ ವ್ಯವಹಾರಕ್ಕೆ ಹತ್ಯೆ ಮಾಡಲಾಗಿದೆ ಎಂದು ಆರೋಪಿ ಪ್ರದೀಪ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಆರೋಪಿಗಳ ಬಂಧನವಾಗಿ 2 ತಿಂಗಳ ಬಳಿಕ ಇದೀಗ ಕಡೂರು ಪೊಲೀಸರಿಂದ ಮೀನಾಕ್ಷಿ ಬಂಧನವಾಗಿದೆ.
ಮೇ 31ರ ರಾತ್ರಿ ಸುಬ್ರಹ್ಮಣ್ಯರ ಬರ್ಬರ ಹತ್ಯೆ ನಡೆದಿತ್ತು. ತನಿಖೆ ಮುಂದುವರಿದು ಕಡೂರು ಪಟ್ಟಣದ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರದ ವಾಸಿ ಪ್ರದೀಪ್ ಆಚಾರ್, ಸಿದ್ದೇಶ್ ಹಾಗೂ ವಿಶ್ವಾಸ್ ರನ್ನು ವಶಕ್ಕೆ ಪಡೆದು ಕೂಲಂಕಶವಾಗಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಖಚಿತ ಕಾರಣ ತಿಳಿದು ಬಂದಿತ್ತು.
ಮೊದಲನೇ ಆರೋಪಿ ಪ್ರದೀಪ್‌ಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿತ್ತು. ಈ ವಿಚಾರದಲ್ಲಿ ಕೊಲೆಯಾದ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಎಂದು ಪ್ರದೀಪ್ ಸ್ನೇಹಿತರಿಗೆ ಹಣದ ಆಮೀಷವೊಡ್ಡಿ ಅವರ ಸಹಾಯ ಪಡೆದು ಕಂಸಾಗರ ಗೇಟ್ ಬಳಿ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ಅವರನ್ನ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. 3 ಜನ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದರು.
ಚಿಕ್ಕಮಗಳೂರಿಗೆ ಕರೆತಂದು ದಾರಿ ಮಧ್ಯೆ ಹತ್ಯೆ ಮಾಡಿ ಪ್ರದೀಪ್ ತನ್ನ ಸ್ನೇಹಿತರ ಜೊತೆ ಸೇರಿ ದೇಹವನ್ನು ಸುಟ್ಟು ಹಾಕಿದ್ದ. ಮೃತ ಸುಬ್ರಹ್ಮಣ್ಯ ಟೈಲರ್ ಕೆಲಸ ಮಾಡುತ್ತಿದ್ದರು. ಆತನ ಶಾಪ್ ಕೀ ಯಿಂದ ಸಿಕ್ಕಿದ ಸುಳಿವು ಅರಸಿ ಹೋದ ಪೊಲೀಸರು ಹತ್ಯೆ ರಹಸ್ಯ ಬಯಲಿಗೆಳೆದಿದ್ದರು.
ಆದರೆ ಸುಬ್ರಮಣ್ಯ ಅವರ ಪತ್ನಿ ಎರಡು ತಿಂಗಳ ಕಾಲ ತನ್ನ ಬಗ್ಗೆ ಸಂಶಯ ಬಾರದ ರೀತಿಯಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಪೊಲೀಸರ ಕೂಲಂಕುಶ ತನಿಖೆಯಿಂದ ಇದೀಗ ಪತಿಯ ಕೊಲೆಯಲ್ಲಿ ಪತ್ನಿಯೇ ವಿಲನ್ ಆಗಿರುವುದು ಬೆಳಕಿಗೆ ಬಂದಿದೆ



