ತನ್ನ ಸಾವಿಗೆ ಪೊಲೀಸ್ ಸಿಬ್ಬಂದಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ನನ್ನು ಅರೆಸ್ಟ್ ಮಾಡಲಾಗಿದೆ.
ಕುದುರೆಮುಖ ಠಾಣಾ ವ್ಯಾಪ್ತಿಯ ನಾಗೇಶ್ ಎಂಬ ವ್ಯಕ್ತಿ ತನ್ನ ಸಾವಿಗೆ ಪೊಲೀಸ್ ಪೇದೆ ಸಿದ್ದೇಶ್ ಮತ್ತು ಕುದುರೆಮುಖ ಪೊಲೀಸರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ನನ್ನು ಚಿಕ್ಕಮಗಳೂರು ಎಸ್ ಪಿ ರವರು ನೇಮಿಸಿದ್ದ ವಿಶೇಷ ತಂಡ ಗೋವಾದಲ್ಲಿ ಅರೆಸ್ಟ್ ಮಾಡಿದೆ.
ಏನಿದು ಪ್ರಕರಣ ?
ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಸಂಸೆ ಗ್ರಾಮದಲ್ಲಿ ಪೊಲೀಸರೇ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದ ನಾಗೇಶ್ ಎಂಬ ಯುವಕನ ವಿರುದ್ಧವೇ ಪ್ರಕರಣ ದಾಖಲಾಗಿತ್ತು.
ಜುಲೈ 15ರಂದು ರಾತ್ರಿ 10.30ರ ಸುಮಾರಿನಲ್ಲಿ ಆಟೊರಿಕ್ಷಾದಲ್ಲಿ ತೆರಳುತ್ತಿದ್ದಾಗ ಕುದುರೆಮುಖ ಠಾಣೆಯ ಕಾನ್‌ಸ್ಟೆಬಲ್ ಸಿದ್ದೇಶ್ ಮತ್ತು ಇಬ್ಬರು
ಸ್ಥಳೀಯರು ದಾರಿಗೆ ಅಡ್ಡಲಾಗಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ರಿಕ್ಷಾದಿಂದ ಇಳಿದು ಮೊಬೈಲ್ ಫೋನ್‌ನಲ್ಲಿ ಟಾರ್ಚ್ ಹಾಕಿಕೊಂಡು ಸಮೀಪಕ್ಕೆ ಹೋದಾಗ ನಾವು ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿಯುತ್ತೀಯಾ ಎಂದು ಪ್ರಶ್ನಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು’ ಎಂದು ನಾಗೇಶ್ ದೂರು ನೀಡಿದ್ದ.

ಈ ದೂರಿನ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿ ಆಟೊರಿಕ್ಷಾ ಮತ್ತು ಅಡಿಕೆಗೆ ಔಷಧಿ ಸಿಂಪಡಿಸುವ ಯಂತ್ರ ವಶಪಡಿಸಿಕೊಂಡಿದ್ದರು .
ತನ್ನ ಆಟೊ ಬಿಡಿಸಿಕೊಳ್ಳಲು ಹಣ ಇಲ್ಲದೆ, ದುಡಿಮೆಯೂ ಇಲ್ಲದೆ ಸಾಲದ ಕಂತು ಕಟ್ಟಲಾರದೆ ಅರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದರು ಎಂದು
ಸಂಬಂಧಿಕರು ತಿಳಿಸಿದ್ದಾರೆ.
ನಾಗೇಶ್ ಪತ್ನಿಗೆ ಒಂದೂವರೆ ತಿಂಗಳ ಮಗು ಇದೆ. ‘ಪೊಲೀಸರ ಜತೆಗೆ ಜಟಾಪಟಿ ನಂತರ ನಾಗೇಶ್ ತನ್ನ ಫೋನ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ.
ಪೊಲೀಸರ ಬಗ್ಗೆ ಹೆದರಿಕೊಂಡಿದ್ದರು’ ಎಂದು ಅವರ ಪತ್ನಿ ದೂರಿದ್ದಾರೆ.
ನಾಗೇಶ್ ಆತ್ಮಹತ್ಯೆಗೆ ಮೊದಲು ಬರೆದಿರುವ ಪತ್ರದಲ್ಲಿ ‘ನನ್ನ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಮತ್ತು ಕುದುರೆಮುಖ ಸಬ್ ಇನ್‌ಸ್ಪೆಕ್ಟರ್ ಕೂಡ
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಉಲ್ಲೇಖಿಸಿದ್ದಾರೆ.
ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದ ಸಂದರ್ಭದಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಕಾನ್‌ಸ್ಟೆಬಲ್ ಸಿದ್ದೇಶ ಮತ್ತು ಸುಳ್ಳು ದೂರು ದಾಖಲು ಮಾಡಿದ ಸಬ್ ಇನ್‌ಸ್ಪೆಕ್ಟರ್ ಆದರ್ಶ್ ಅವರನ್ನು ಸೇವೆಯಿಂದ ವಜಾ ಮಾಡಿ ಬಂಧಿಸಬೇಕು. ನಾಗೇಶ್ ಕುಟುಂಬಕ್ಕೆ
ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ದೂರು ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ‘ನಾಗೇಶ್ ಸಾವಿನಿಂದ ನಮಗೂ ನೋವಾಗಿದೆ. ಒಂದು ತಿಂಗಳ ಮಗು ಮತ್ತು ಪತ್ನಿ ಬಗ್ಗೆ ನಮಗೂ ಸಹಾನುಭೂತಿ ಇದೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ
ನೀಡಿದ್ದರು.
ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ನಾಗೇಶ್ ನನ್ನು ಗೋವಾದಿಂದ ಬಂಧಿಸಿ ಕರೆತರಲಾಗಿದೆ.



