ಗಣೇಶ ಉತ್ಸವ ಮತ್ತು ಈದ್ ಮಿಲಾದ್ ಆಚರಣೆಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಎಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು. ಇದರಿಂದ ಹಬ್ಬಗಳ ಆಚರಣೆಗೆ ಯಾವುದೇ ತೊಂದರೆಯಾಗದು. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮೂಡಿಗೆರೆ ವೃತನಿರೀಕ್ಷಕ ರಾಜಶೇಖರ್ ತಿಳಿಸಿದರು.
ಇತ್ತೀಚೆಗೆ ಮೂಡಿಗೆರೆ ತಾಪಂ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ, ಈದ್ ಮಿಲಾದ್ ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶ ಉತ್ಸವಕ್ಕೆ ಪೊಲೀಸ್ ಇಲಾಖೆ, ಪಪಂ, ಗ್ರಾಮ ಪಂಚಾಯಿತಿ, ಅಗ್ನಿಶಾಮಕ ದಳದವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿಯಾಗಿದ್ದರೆ ಅವರಿಂದಲೂ ಲಿಖಿತ ರೂಪದಲ್ಲಿ ಅನುಮತಿ ಪಡೆಯಬೇಕು. ಸಾರ್ವಜನಿಕರಿಂದ ಬಲವಂತದ ಚಂದ ವಸೂಲಿ ಮಾಡುವಂತಿಲ್ಲ. ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸಬಾರದು. ಇಲಾಖೆಯ ಅಂಶಗಳನ್ನು ಪಾಲಿಸಬೇಕು. ಗಣಪತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ರಾತ್ರಿ 10ರವರೆಗೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶವಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಅಶ್ವಿನಿ ಮಾತನಾಡಿ, ಗಣೇಶ ಉತ್ಸವದ ವೇಳೆ ಗೊಂದಲ ಉಂಟಾಗದಂತೆ ಆಯೋಜಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಂಟಿಂಗ್ಸ್, ಬ್ಯಾನರ್ ಹಾಕಲು ದಿನಾಂಕ ನೀಡಿ ಅನುಮತಿ ಪಡೆಯಬೇಕು. ಯಾವುದೆ ಗೊಂದಲಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಹಿಂದೂಮಹಾಗಣಪತಿ ಸಮಿತಿ ಅಧ್ಯಕ್ಷ ಪಿ.ಜಿ. ಅನುಕುಮಾರ್ ಮಾತನಾಡಿ : ಸಾಂಸ್ಕೃತಿಕ ಕಾರ್ಯಕ್ರಮ ವರ್ಷಕ್ಕೊಮ್ಮೆ ನಡೆಯುವುದರಿಂದ ಸಾರ್ವಜನಿಕರಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಅಧಿಕಾರಿಗಳು ಆಯೋಜಕರ ಮೇಲೆ ಹೆಚ್ಚು ನಿರ್ಬಂಧ ವಿಧಿಸಿ ಒತ್ತಡ ಹಾಕಬಾರದು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಬಾರದು ಎಂದು ಒತ್ತಾಯಿಸಿದರು.
ತಾಪಂ ಇಒ ದಯಾವತಿ, ಪಿಎಸ್‌ಐಗಳಾದ ಶ್ರೀನಾಥ್ ರೆಡ್ಡಿ, ದಿಲೀಪ್ ಕುಮಾರ್, ಹರ್ಷವರ್ಧನ್, ಹಿಂದು ಮಹಾ ಗಣಪತಿ ಸಮಿತಿ ಪದಾಧಿಕಾರಿಗಳಾದ ಜೆ.ಎಸ್. ರಫಂ, ಪ್ರವೀಣ್, ಭರತ್, ಶಿವಣ್ಣ, ಅನಿಲ್, ಬದ್ರಿಯಾ ಮಸೀದಿ ಅಧ್ಯಕ್ಷ ಎ.ಎಂ. ಶರೀಫ್, ಅಬ್ರಾರ್ ಅಹಮದ್, ಜಿಯಾವುಲ್ಲ, ಅಕ್ಟರ್ ಅಲಿ ಇತರರಿದ್ದರು.



