ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡಿದ್ದ ಅನಾಮಿಕನನನ್ನು ಬಂಧಿಸಲಾಗಿದೆ. ಎಸ್ಐಟಿ ಅಧಿಕಾರಿಗಳು ಮಾಸ್ಕ್ಮ್ಯಾನ್ನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅನಾಮಿಕ ನಿಜ ಹೆಸರು ಚಿನ್ನಯ್ಯ ಎಂದಾಗಿದ್ದು, ಈತ ಮೂಲತಃ ಮಂಡ್ಯ ಜಿಲ್ಲೆಯವನು ಎನ್ನಲಾಗಿದ್ದು, ತಮಿಳುನಾಡಿನಲ್ಲಿದ್ದ ಚಿನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್ ಕರೆದುಕೊಂಡು ಬಂದಿತ್ತು ಎನ್ನಲಾಗುತ್ತಿದೆ. ಸದ್ಯ ಆತ ಎಸ್ಐಟಿ ವಶದಲ್ಲಿದ್ದು, ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.
ಎಸ್ ಐ ಟಿ ಎದುರು ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ನನಗೆ ಆಮೀಷ ಒಡ್ಡಿ ಹೇಳಿಕೆ ನೀಡಿಸಲಾಗಿತ್ತು ಎಂದು ಎಸ್.ಐ.ಟಿ.ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗು್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕು.
ತಾನು ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿದ್ದ ಸಮಯದಲ್ಲಿ ನೇತ್ರಾವತಿ ಮತ್ತು ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದಾಗಿ, ಅದರಲ್ಲಿ ಅನೇಕ ಮಹಿಳೆಯರ, ಹೆಣ್ಣುಮಕ್ಕಳ, ಶಾಲಾ ಬಾಲಕೀಯರ ಹೆಣಗಳು ಇದ್ದವು ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ. ಈತನ ಹೇಳಿಕೆಯನ್ನು ಆದರಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸುಮಾರು 15 ದಿನಗಳ ಕಾಲ ಅನಾಮಿಕ ಹೇಳಿದ ಜಾಗಗಳಲ್ಲಿ ಅಗೆದು ಶೋಧ ಕಾರ್ಯ ನಡೆಸಲಾಗಿತ್ತು. ಒಂದು ಕಡೆ ಪುರುಷನ ಮೂಳೆ ಸಿಕ್ಕಿದ್ದು ಬಿಟ್ಟರೆ ಇನ್ಯಾವ ಕಡೆಯೂ ಯಾವುದೇ ಕುರುಹು ಸಿಕ್ಕಿರಲಿಲ್ಲ.
ಈ ಪ್ರಕರಣ ವಿಶ್ವದಾದ್ಯಂತ ಸುದ್ದಿಯಾಗಿದ್ದು, ಸಾಕಷ್ಟು ಪರ ವಿರೋಧ ಹೇಳಿಕೆ, ಪ್ರತಿಭಟನೆಗಳು ನಡೆದಿದ್ದವು. ಅಂತಿಮವಾಗಿ ಅನಾಮಿಕನ ಮುಖವಾಡವನ್ನು ತೆಗೆದು ಆತನ ನಿಜರೂಪವನ್ನು ಎಸ್.ಐ.ಟಿ. ತೋರ್ಪಡಿಸಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡಬೇಕು.


