ಕೊಪ್ಪ ತಾಲ್ಲೂಕಿನಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಮೂವರು ನೇಪಾಳಿ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ & ಕೃತ್ಯಕ್ಕೆ ಬಳಸಿದ ಎರಡು ಕಾರು ಸೇರಿದಂತೆ ಅಂದಾಜು ಒಟ್ಟು 1,75,00000/- ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಗಸ್ಟ್ 20 ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್‌ನ ಮಾಲೀಕ ಎಚ್ .ಜಿ. ವೆಂಕಟೇಶ್ ಮನೆಯಲ್ಲಿ ನಗದು ಮತ್ತು ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದರು. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೆಂಕಟೇಶ್ ಮನೆಯಲ್ಲಿ ಕೆಲಸಕ್ಕೆ ಇದ್ದ ನೇಪಾಳಿ ಮೂಲದ ದಂಪತಿಗಳೇ ದರೋಡೆಯ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ವೆಂಕಟೇಶ್ ಅವರ ಮನೆಗೆ ಕೆಲಸಕ್ಕೆ ಬಂದು ಸೇರಿದ್ದ ದಂಪತಿಗಳ ಮೇಲೆ ವಿಶ್ವಾಸವಿಟ್ಟು ಅವರನ್ನು ಮನೆಯಲ್ಲಿ ಬಿಟ್ಟು ವೆಂಕಟೇಶ್ ಕುಟುಂಬ ವಿವಾಹ ಸಮಾರಂಭಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ದಂಪತಿಗಳು ಇತರೆ ನೇಪಾಳಿ ಮೂಲದವರನ್ನು ವಿವಿದೆಡೆಯಿಂದ ಕರೆಸಿಕೊಂಡು ವ್ಯವಸ್ಥಿತವಾಗಿ ದರೋಡೆ ಮಾಡಿದ್ದಾರೆ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಟಿ.ಜಯಕುಮಾರ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚನೆ ಮಾಡಿದ್ದು ಮಹಾರಾಷ್ಟ್ರಪೊಲೀಸರ ಸಹಕಾರದೊಂದಿಗೆ ಸಾಂಗ್ಲಿಯಲ್ಲಿ ಮೂವರು ಆರೋಪಿ ಗಳನ್ನು ಬಂಧಿಸಲಾಗಿದೆ. ಮನೆಗೆಲಸಕ್ಕೆ ಇದ್ದ ದಂಪತಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ನೇಪಾಳದ ರಾಜ್ಯದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್ ,ಕರಂ ಸಿಂಗ್ ಬಹಾದ್ದೂರ್ ಇವರನ್ನು ವಶಕ್ಕೆ ಪಡೆದು ಆರೋಪಿಗಳಿಂದ ಅಂದಾಜು 1,50,00,000/- ಮೌಲ್ಯದ 1 ಕೆಜಿ 800 ಗ್ರಾಂ.ತೂಕದ ಚಿನ್ನ, 1 ಕೆಜಿ 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ (ಎರಡು ಕಾರುಗಳ ಬೆಲೆ 25,00,000/- ಆಗಿದ್ದು )ಅಂದಾಜು ಒಟ್ಟು 1.75.00,000/- ರೂ ಮೌಲ್ಯದ ಸ್ವತ್ತುಗಳನ್ನು ವಶಕ್ಕೆಪ ಪಡೆಯಲಾಗಿದೆ.


