ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರೈತ ಪರವಾದ ಯಾವುದೇ ಯೋಜನೆ ರೂಪಿಸಿಲ್ಲವೆಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಅನಂದಪ್ಪ ದೂರಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಈ ಹಿಂದೆ ರಾಜ್ಯ ಸರಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಲಾಗಿದೆ. ಪಹಣಿ ಮತ್ತು ಎಂಆರ್ ಗಳ ಮೇಲೆ ಶೇ.60ರಷ್ಟು ದರ ಏರಿಸಲಾಗಿದೆ. ಅದೂ ಕೂಡ ಆನ್‍ಲೈನ್‍ನಲ್ಲಿ ಅರ್ಜಿ ಹಾಕಿ ವಾರಗಟ್ಟಲೆ ಕಚೇರಿಗೆ ಅಲೆದಾಡಬೇಕಾಗಿದೆ. ಮಲೆನಾಡು ಭಾಗದಲ್ಲಿ ಮಳೆಯಿಂದ ಕಾಫಿ, ಕಾಳುಮೆಣಸು, ಅಡಕೆ ಗಿಡಗಳು ಕೊಳೆ ರೋಗಕ್ಕೆ ತುತ್ತಾಗಿ ಫಸಲು ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ರೈತರ ಮೇಲೆ ಸರಕಾರ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಫಾರಂ ನಂ 50 ಹಾಗೂ 53ಯ ಸಾವಿರಾರು ಅರ್ಜಿಗಳು ಇಂದಿಗೂ ವಿಲೇ ಮಾಡಿಲ್ಲ. ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು. ಮಲೆನಾಡಿನಲ್ಲಿ ಇದೀಗ ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷ ಏರ್ಪಟ್ಟಿದ್ದು, ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರೈತರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುವ ಮೂಲಕ ರೈತರ ಸಮಸ್ಯೆಗಳನ್ನು ಶಾಶ್ವತ ಪರಿಹರಿಸಬೇಕೆಂದು ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಗೌಡ, ತಾಲೂಕು ಅಧ್ಯಕ್ಷ ಪ್ರವೀಣ್, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಜಿಲ್ಲಾ ಕಾರ್ಯದರ್ಶಿ ಜೆ.ಎಸ್. ರಘು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.



