ಒಂದು ಪತ್ರಿಕೆ ಯಶಸ್ಸಿನತ್ತ ಸಾಗಲು ಹಾಗೂ ಆ ಪತ್ರಿಕೆ ಜನ ಸಾಮಾನ್ಯರ ಕೈಗೆ ಸೇರಬೇಕೆಂದರೆ ಪತ್ರಿಕಾ ವಿತರಕರ ಪಾತ್ರ ಮಹತ್ವವಾಗಿದೆ ಎಂದು ಮೂಡಿಗೆರೆ ಕರ್ತವ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಹೇಳಿದರು.
ಅವರು ಗುರುವಾರ ಪಟ್ಟಣದ ಪತ್ರಿಕಾ ಸಂಘದ ಕಚೇರಿಯಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ, ಪಟ್ಟಣದಲ್ಲಿ 50 ವರ್ಷದಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ಜಹೀರ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಅನೇಕ ಮಾರ್ಗಗಳಿವೆ. ಓದುಗರಿಲ್ಲದೇ ಯಾವ ಪತ್ರಿಕೆಗಳು ಕೂಡ ಯಶಸ್ಸಿನೆಡೆಗೆ ಸಾಗಲು ಸಾಧ್ಯವಿಲ್ಲ. ಪತ್ರಿದಿನ ದಿನಪತ್ರಿಕೆಗಳು ಮುದ್ರಣವಾಗಿ ಹೊರ ತರಲು ಸಂಪಾದಕ, ವರದಿಗಾರ, ಸಿಬ್ಬಂದಿ ಶ್ರಮಿಸಿದರೆ ಮಾತ್ರ ಸಾಧ್ಯವಿಲ್ಲ. ಅದನ್ನು ಮಳೆ ಗಾಳಿ ಎನ್ನದೇ ಬೆಳ್ಳಬೆಳಗ್ಗೆ ಓದುಗರಿಗೆ ಮುಟ್ಟಿಸುವ ಮಹತ್ತರವಾದ ಕಾರ್ಯ ಪತ್ರಿಕಾ ವಿತರಿಕರೂ ಕೂಡ ಮಹತ್ವದ ಪಾತ್ರ ವಹಿಸುತ್ತಾರೆ. ಅಂತವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ. ಅಲ್ಲದೇ ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಪತ್ರಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪತ್ರಿಕಾ ವಿತರಕ ಜಹೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಹೀರ್ ಅವರು ಕಳೆದ 50 ವರ್ಷಗಳಿಂದ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದೇನೆ. ಈ ಕೆಲಸ ನನಗೆ ತೃಪ್ತಿ ತಂದಿದೆ. ಆದರೆ ಪತ್ರಿಕೆ ಮಾರಾಟ ಮಾಡಲು ಜಾಗ ನೀಡುವಂತೆ ಹಲವಾರು ಬಾರಿ ಪ.ಪಂ.ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆ ಬಗೆಹರಿಸಲು ಪತ್ರಕರ್ತರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಬಕ್ಕಿ, ಅಮರ್‍ನಾಥ್, ಎ.ಆರ್.ಉದಯಶಂಕರ್, ಉಮಾಶಂಕರ್, ಪ್ರಸನ್ನ ತಳವಾರ, ಮನ್ಸೂರ್ ಮತ್ತಿತರರಿದ್ದರು.



