ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತವೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮೂವರು ಇಂಜಿನಿಯರ್ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ದುರಂತ ಸಾವಿಗೀಡಾಗಿದ್ದಾರೆ.
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ವಿವರ ಹೀಗಿದೆ…
1. ಪ್ರವೀಣ್ ಕುಮಾರ್, ಇಂಜಿನಿಯರ್ ವಿದ್ಯಾರ್ಥಿ ಬಳ್ಳಾರಿ
2. ರಾಜೇಶ ಬಿನ್ ಮೂರ್ತಿ 17 ವರ್ಷ ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು
3. ಈಶ್ವರ ಬಿನ್ ರವಿಕುಮಾರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು
4. ಗೋಕುಲ ಬಿನ್ ಸಂಪತ್ ಕುಮಾರ್ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು
5. ಕುಮಾರ ಬಿನ್ ತಿಮ್ಮಯ್ಯ (25 ) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
6. ಪ್ರವೀಣ ಬಿನ್ ಹನುಮಯ್ಯ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
7. ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ ಗ್ರಾಮ, ಇಂಜಿನಿಯರ್ ವಿದ್ಯಾರ್ಥಿ ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.
8. ಸುರೇಶ ಬಿನ್ ರಮೇಶ ಇಂಜಿನಿಯರ್ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ
9. ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲ್ಲೂಕು
ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 20 ಗಾಯಾಳುಗಳಿಗೆ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಮೂವರು ಐಸಿಯುನಲ್ಲಿದ್ದಾರೆ. 7 ಮಂದಿ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ
ಹಾಸನದಿಂದ ಹೊಳೆನರಸೀಪುರದ ಕಡೆಗೆ ಮಹಾರಾಷ್ಟ್ರಕ್ಕೆ ಸೇರಿದ ಟ್ರಕ್ ಹೋಗುತ್ತಿತ್ತು. ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ. ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕ ಭುವನೇಶ್‌ಗೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ.
ಮೆರವಣಿಯಲ್ಲಿ ಸಾವಿರಾರು ಜನರು ಡಿಜೆ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕುತ್ತ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಟ್ರಕ್ ವೇಗವಾಗಿ ಬಂದು ಜನರ ಮೇಲೆ ಹರಿದಿದೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸೆ ಸರ್ಕಾರ ಮುತುವರ್ಜಿ ವಹಿಸಿದೆ




