ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 13.61 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇಕಡ 7 ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್.ನಾಗರಾಜು ಬಾಳೆಹಳ್ಳಿ ತಿಳಿಸಿದ್ದಾರೆ.
ಅವರು ಶುಕ್ರವಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದರು.
ಸಂಘವು ಸದರಿ ಸಾಲಿನಲ್ಲಿ 36 ಲಕ್ಷ ರೂ ನಿಗದಿತ ಠೇವಣಿಗಳನ್ನು ಸಂಗ್ರಹಿಸಿ ಸಂಘದ 14 ಜನ ಸದಸ್ಯರಿಗೆ ಒಟ್ಟು 34 ಲಕ್ಷ ರೂ ಸ್ವಂತ ಬಂಡವಾಳದಿಂದ ಕೆಸಿಸಿ ಸಾಲವನ್ನು ವಿತರಿಸಲಾಗಿದೆ. ಸ್ವಂತ ಬಂಡವಾಳವನ್ನು ಶೂನ್ಯ ಬಡ್ಡಿದರದ ಕೆಸಿಸಿ ಸಾಲ ನೀಡಿರುವುದರ ಬಗ್ಗೆ ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 5 ಜನ ಸದಸ್ಯರಿಗೆ 19 ಲಕ್ಷ ವಾಹನ ಸಾಲ ವಿತರಿಸಲಾಗಿದೆ ಹಾಗೂ 52 ಜನ ಸದಸ್ಯರಿಗೆ 24 ರೂ ಲಕ್ಷ ಗೊಬ್ಬರ ಸಾಲವನ್ನು ವಿತರಿಸಲಾಗಿದೆ ಹಾಗೂ ಈ ಸಾಲಿನಲ್ಲಿ ನಮ್ಮ ಸಂಘವು 74 ಲಕ್ಷ ಗಳ ಗೊಬ್ಬರ ವಹಿವಾಟು ಮಾಡಿದ್ದು, ಸಕಾಲದಲ್ಲಿ ಗೊಬ್ಬರ ವಿತರಣೆಯನ್ನು ಮಾಡಲಾಗಿರುತ್ತದೆ.
ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿಯವರ ಶ್ರಮದಿಂದ ಸಂಘವು 2024-25ನೇ ಸಾಲಿಗೆ ರೂ. 6.12 ಲಕ್ಷ ವ್ಯಾಪಾರ ಲಾಭವನ್ನು ಹೊಂದಿರುತ್ತದೆ ಹಾಗೂ ಸಂಘವು ಈ ಸಾಲಿಗೆ 13.61 ಲಕ್ಷ ರೂಗಳ ನಿವ್ವಳ ಲಾಭವನ್ನು ಹೊಂದಿರುತ್ತದೆ. ಸದಸ್ಯರಿಗೆ ಶೇಕಡಾ 7 ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಗಿದೆ.
ಸಿಬ್ಬಂದಿಗಳ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಸಂಘದ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಸಂಘದ ಸದಸ್ಯರು ನಮ್ಮ ಸಂಘದಲ್ಲಿ ದೈನಂದಿನ ವ್ಯವಹಾರಗಳನ್ನು ಮಾಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು, ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷ ಎಂ.ಎಸ್.ಪ್ರಸನ್ನ, ನಿರ್ದೇಶಕರಾದ ಬಿ.ಟಿ. ಶ್ರೀನಾಥ್, ಹೆಚ್.ವಿ. ವಿನಯ್ ಕುಮಾರ್, ವಿನಯ್ ಗೌಡ ಬಿ.ಆರ್., ಹೆಚ್.ವಿ. ರಾಘವೇಂದ್ರ, ಬಿ.ಸಿ. ದಿನೇಶ್, ಮೊಹಮದ್ ಜಮೀರ್ ಕೆ, ಕುಮಾರಿ ಬಿ.ಎಸ್. ಸಾವಿತ್ರಿ, ಶ್ರೀಮತಿ ದೀಪ್ತಿ ಕೆ.ಜಿ., ರಮೇಶ್, ಬಿ.ಪಿ. ರಂಗನಾಥ್, ಮೇಲ್ವಿಚಾರಕರಾದ ನಿತಿನ್ ಪಟೇಲ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಶೇಖರ್ ವಾರ್ಷಿಕ ವರದಿ ಮಂಡಿಸಿದರು.




