ಮಹಿಳೆಯರು ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ಅನಿವಾರ್ಯ. ಮಹಿಳಾ ಸೊಸೈಟಿ ಮಹಿಳಾ ಸಬಲೀಕರಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಅಧ್ಯಕ್ಷೆ ಲಕ್ಷ್ಮಿನಂಜಯ್ಯ ಅಭಿಪ್ರಾಯಿಸಿದು.
ಕೋಟೆ ಅಗ್ರಹಾರ ರಸ್ತೆಯ ಚಿಕ್ಕಮಗಳೂರು ತಾಲ್ಲೂಕು ಮಹಿಳಾ ವಿವಿದೊದ್ದೇಶ ಸಹಕಾರ ಸಂಘದ 2024-25ನೆಯ ಸಾಲಿನ ಸರ್ವಸದಸ್ಯರ ವಾಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಸವೂರ್ ಸಭಾಂಗಣದಲ್ಲಿ ನಿನ್ನೆ ಅವರು ಮಾತನಾಡಿದರು.
ಕೋಟೆಯಲ್ಲಿರುವ ಏಕೈಕ ಮಹಿಳಾ ಸೊಸೈಟಿ ಇದಾಗಿದ್ದು ಇದನ್ನು ಉಳಿಸಿಕೊಳ್ಳುವುದರ ಜೊತೆಗೆ ಸದೃಢಗೊಳಿಸುವುದು ನಮ್ಮೆಲ್ಲರ ಮೇಲಿನ ಹೊಣೆಗಾರಿಕೆಯಾಗಿದೆ. ಠೇವಣಿ ಜೊತೆಗೆ ಆರ್.ಡಿ.ಯನ್ನು ನೀಡುವ ಮೂಲಕ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಲಕ್ಷ್ಮಿನಂಜಯ್ಯ, ತಾವೇ ಸ್ವತಃ 13ಲಕ್ಷರೂ. ಠೇವಣಿ ಹೂಡಿಕೆ ಮಾಡಿದ್ದು, ಎಲ್ಲ ನಿರ್ದೇಶಕರು ಹಾಗೂ ಷೇರುದಾರರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.
ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಕಾಲ ಕಾಲಕ್ಕೆ ಕಂತು ಮತ್ತು ಬಡ್ಡಿಯನ್ನು ಮರು ಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ನೆರವಾಗಬೇಕು. ಎರಡರಿಂದ ಎಂಟು ವರ್ಷಗಳವರೆಗೂ ಸುಸ್ತಿದಾರರಾದ 32ಸದಸ್ಯರ ಪಟ್ಟಿ ಸಿದ್ಧಪಡಿಸಿ ಅವರ ಮನೆ ಬಾಗಿಲಿಗೆ ಸ್ವತಃ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದ್ದು, 16 ಜನರಿಂದ 1.24ಲಕ್ಷರೂ. ವಾಸೂಲಾತಿ ಮಾಡಲಾಗಿದೆ ಎಂದ ಅಧ್ಯಕ್ಷರು, ಒಂದು ವರ್ಷದ ಆರ್.ಡಿ.ಗೆ ಶೇ.4 ಬಡ್ಡಿ ನೀಡುತ್ತಿದ್ದು ಈಗ ಮೂರುವರ್ಷಕ್ಕೆ ಶೇ.5ರಬಡ್ಡಿ ನೀಡಲಾಗುತ್ತಿದೆ. ಅದೇ ರೀತಿ ಠೇವಣಿಯ ಬಡ್ಡಿದರವನ್ನು ಶೇ.5 ರಿಂದ 6.5ಕ್ಕೆ ಹೆಚ್ಚಿಸಲಾಗಿದೆ. ಸದಸ್ಯರು ಇದರ ಲಾಭ ಪಡೆಯಬೇಕೆಂದರು.
ಆರಂಭದಲ್ಲಿ 100ರೂ. ಮುಖಬೆಲೆಯ ಷೇರಿನೊಂದಿಗೆ ಸದಸ್ಯರಾದವರು 10ಷೇರು ಖರೀದಿಸಿ ಕನಿಷ್ಟ 1,000ರೂ.ಮೌಲ್ಯದ ಷೇರು ಹೊಂದುವ ಮೂಲಕ ಮುಂದುವರೆಯಬೇಕೆಂದು ಸಂಘದ ಬೈಲಾದಲ್ಲಿ ಈಗಾಗಲೇ ತಿದ್ದುಪಡಿ ಮಾಡಲಾಗಿದೆ. ಕಡಿಮೆ ಮೊಬಲಗಿನ ಷೇರು ಹೊಂದಿರುವವರಿಗೆ ಈಗಾಗಲೇ ವೈಯಕ್ತಿವಾಗಿ ನೋಟಿಸ್ ನೀಡಲಾಗಿದೆ. ಮಹಾಸಭೆಯಲ್ಲೂ ತಿಳುವಳಿಕೆ ನೀಡಲಾಗಿದೆ. ವ್ಯತ್ಯಾಸ ಷೇರು ಮೊತ್ತವನ್ನು ಪಾವತಿಸದಿದ್ದರೆ ಸರ್ಕಾರವೇ ಅನರ್ಹಗೊಳಿಸುತ್ತದೆ. 20 ದಿನದೊಳಗಾಗಿ ಪೂರ್ಣ ಹಣ ಪಾವತಿಸಬೇಕು ಇಲ್ಲದಿದ್ದರೆ ಇರುವ ಹಣವನ್ನು ವಾಪಾಸ್ಸು ಪಡೆಯಬೇಕು. ಆದಾಗದಿದ್ದರೆ ಅವರ ಷೇರು ಮೊಬಲಗನ್ನು ಹಿಂತಿರುಗಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಸದಸ್ಯರು ಸಂಘದಲ್ಲಿ ವ್ಯವಹರಿಸಬೇಕು. ಇತರರನ್ನೂ ಕರೆ ತರಬೇಕು. ಸಂಘಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದ 45ರಿಂದ 50ಜನರ ಷೇರನ್ನು ವಾಪಾಸ್ ಮಾಡಲಾಗಿದೆ. 60ಜನರ ನವೀಕರಣ ಆಗಿದೆ. 23 ಹೊಸ ಷೇರುದಾರರನ್ನು ಕರೆ ತರಲಾಗಿದೆ. ಎಲ್ಲರೂ ಕೈಜೋಡಿಸಿದಾಗ ಸಹಜವಾಗಿ ಅಭಿವೃದ್ಧಿ ವೇಗಗೊಳ್ಳುತ್ತದೆ. ಉತ್ತೇಜನ ಮತ್ತು ಪರಸ್ಪರ ಪ್ರೇರಣೆಗೊಳ್ಳುತ್ತದೆ ಎಂದ ಲಕ್ಷ್ಮಿನಂಜಯ್ಯ, ಸಂಘದ ಚಟುವಟಿಕೆಗಳು ವೃದ್ಧಿಸುತ್ತಿದ್ದು ಆಡಿಟ್ ವರ್ಗೀಕರಣದಲ್ಲಿ ‘ಬಿ’ಗ್ರೇಡ್ ಪಡೆದಿದೆ. ಮುಂಬರುವ ದಿನಗಳಲ್ಲಿ ವೆಚ್ಚವನ್ನು ತಗ್ಗಿಸಿ ಆದಾಯವನ್ನು ಹೆಚ್ಚಿಸಿಕೊಂಡು ಷೇರುದಾರರಿಗೆ ಲಾಭಾಂಶ ಕೊಡುವತ್ತ ಹೆಜ್ಜೆ ಹಾಕಲಾಗುವುದೆಂದು ಭರವಸೆ ನೀಡಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಆರ್.ಡಿ. ಮತ್ತು ಎಫ್.ಡಿ. ಮಾಡಿದ ಸದಸ್ಯರುಗಳಿಗೆ ನೆನಪಿನಕಾಣಿಕೆ ನೀಡಲಾಯಿತು. ನಿರ್ದೇಶಕರುಗಳಾದ ಜಯಶೀಲಾ, ನೇತ್ರಾವೆಂಕಟೇಶ್, ಜಯಶ್ರೀಅಂಥೋಣಿ, ಶೀಲಾ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಪವಿತ್ರಾಅರಸ್ 2024-45 ಸಾಲಿನ ಆಡಿಟ್ ವರದಿ ಮಂಡಿಸಿದರು. ನಿರ್ದೇಶಕರುಗಳಾದ ಮೋಹನಕುಮಾರಿ ಸ್ವಾಗತಿಸಿ, ಪದ್ಮಾಮಹಾಂತೇಶ್ ವಂದಿಸಿದರು. ಗೀತಾಸುಂದ್ರೇಶ್ ನಿರೂಪಿಸಿದರು. ದಾಕ್ಷಾಯಣಿ ಸಭೆಯ ಆಹ್ವಾನಪತ್ರಿಕೆ ಓದಿದರು. ಪುಟಾಣಿಗಳಾದ ಪ್ರತೀಕ್ಷಾ ಮತ್ತು ಯತೀಕ್ಷಾಪ್ರಾರ್ಥಿಸಿದರು. ವಿವಿಧ ಆಟೋಟಸ್ಪರ್ಧಾವಿಜೆತರಿಗೆ ಬಹುಮಾನ ನೀಡಲಾಯಿತು.



