ಸಾಮಾಜಿಕ ಮತ್ತು ಶೈಕ್ಷಣಿಕೆ ಕ್ಷೇತ್ರದಲ್ಲಿ ಜೇಸಿಐ ಸಂಸ್ಥೆ ನೀಡುತ್ತಿರುವ ಸೇವೆ ಅಪಾರವಾದುದು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಂತಹ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಅವರು ಸೋಮವಾರ ಜೇಸಿಐ ಮೂಡಿಗೆರೆ ವತಿಯಿಂದ ಸೆಪ್ಟಂಬರ್ 9 ರಿಂದ 15ರವರೆಗೆ ಹಮ್ಮಿಕೊಂಡಿದ್ದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಜೇಸಿಐ ನ ಮೂಡಿಗೆರೆ ಘಟಕವು 50 ವರ್ಷಗಳನ್ನು ಪೂರೈಸಿದ್ದು, ಹಲವಾರು ವರ್ಷಗಳ ಕಾಲ ಸಂಸ್ಥೆಯು ಈ ಭಾಗದಲ್ಲಿ ವಿದ್ಯಾರ್ಥಿಗಳು, ಯುವಜನರಿಗೆ ತರಬೇತಿಗಳನ್ನು ನೀಡುವುದು, ಸಮಾಜ ಸೇವಾ ಕಾರ್ಯಗಳನ್ನು ಮಾಡುವುದರ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಿದೆ. ಇಂತಹ ಸಂಸ್ಥೆಗಳ ನಿಸ್ವಾರ್ಥವಾದ ಸೇವೆಯಿಂದ ಸರ್ಕಾರದ ಕೆಲಸಗಳು ಸುಲಭವಾಗುತ್ತಿವೆ. ಯುವಜನರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜೇಸಿಐ ವಲಯ ಅಧ್ಯಕ್ಷ ವಿಯಕುಮಾರ್ ಮಾತನಾಡಿ ಜೇಸಿಐ ಸಂಸ್ಥೆಯು ಇಂದು ವಿಶ್ವದ 127 ದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆ ಹೊಂದಿದೆ. ಯುವಜನರಲ್ಲಿ ಸಕಾರಾತ್ಮಕ ಬದಲಾವಣೆಗೆ ಸಂಸ್ಥೆ ಶ್ರಮಿಸುತ್ತಿದೆ. ಮೂಡಿಗೆರೆ ಜೇಸಿಯ ಘಟಕವು ಭಾರತದ ಜೇಸಿ ಇತಿಹಾಸದಲ್ಲಿ ಒಂದು ಹಿರಿಯ ಮತ್ತು ಪ್ರಮುಖ ಘಟಕವಾಗಿದೆ ಎಂದರು.
ವೇದಿಕೆಯಲ್ಲಿ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ, ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್, ಜೇಸಿ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಲೇಡಿ ಜೇಸಿ ಅಧ್ಯಕ್ಷೆ ರೇಖಾ ನಾಗರಾಜ್, ಸಪ್ತಾಹದ ಮಹಾ ನಿರ್ದೇಶಕಿ ಕೃತಿ ಪ್ರದೀಪ್, ದಿನದ ನಿರ್ದೇಶಕಿ ರಾಘವಿ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಂಸ ಇದ್ದರು.
ಮೂಡಿಗೆರೆ ಜೇಸಿಐ ಅಧ್ಯಕ್ಷ ಕೆ.ಕೆ. ಪ್ರದೀಪ್ ಕುನ್ನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ 7 ದಿನಗಳ ಕಾಲ ಸಪ್ತಾಹದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿಯಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಪ್ರಸ್ತುತ ಮೂಡಿಗೆರೆ ಜೇಸಿಯ ಕಾರ್ಯದರ್ಶಿಯಾಗಿರುವ ಪಿ.ಕೆ. ಹಮೀದ್ ಅವರಿಗೆ ಜೇಸಿಐ ಪ್ರತಿಷ್ಟಿತಿ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿವೃತ್ತ ಅಂಗನವಾಡಿ ಶಿಕ್ಷಕಿ ಕೃಷ್ಣಕುಮಾರಿ, ನಿವೃತ್ತ ಉಪನ್ಯಾಸಕ ದೇವರಾಜು, ನಿವೃತ್ತ ಶಿಕ್ಷಕಿ ದ್ರಾಕ್ಷಾಯಿಣಿ ಅವರನ್ನು ಗೌರವಿಸಲಾಯಿತು.

ಡ್ರೋನ್ ತಯಾರಿಸಿ ಗಮನ ಸೆಳೆದಿರುವ ಸೋನಿತ್ ಗೌಡ ಸಕಲೇಶಪುರ ಹಾಗೂ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಅಗಿ ಆಯ್ಕೆಯಾಗಿರುವ ಶ್ರಾವ್ಯ ಎಸ್. ಕುಮಾರ್ ಅವರನ್ನು ಸನ್ಮಾನಿಸಲಾಯಿತು.



