ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯಿದೆಯನ್ನು(ಆಟ್ರಾಸಿಟಿ) ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಯುವ ಒಕ್ಕಲಿಗರ ಸಂಘ ಆಗ್ರಹಿಸಿದೆ.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅವರ ನೇತೃತ್ವದಲ್ಲಿ ಜಿಲ್ಲಾ ಆಟದ ಮೈದಾನದಲ್ಲಿ ಸೇರಿದ್ದ ಕಾರ್ಯಕರ್ತರು ಅಟ್ರಾಸಿಟಿ ಪ್ರಕರಣ ದುರುಪಯೋಗದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ನಂತರಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ಅವರು ಮಾತನಾಡಿ, ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅಂಶದೊಂದಿಗೆ ಸಮಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಕೆಲವು ಕಾಯಿದೆಗಳನ್ನು ಜಾರಿಯಾಡಿದ್ದು ಅದರಂತೆ ದೌರ್ಜನ್ಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಅಸ್ಪೃಷ್ಯತೆ ನಿಷೇಧಿಸಿದ್ದು, ಅದರ ಭಾಗವಾಗಿ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯಿದೆಯನ್ನು(ಆಟ್ರಾಸಿಟಿ) ಜಾರಿಗೆ ತರಲಾಗಿದೆ. ನೊಂದಂತಹ ಜನರಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಸಮಾಜದಲ್ಲಿ ಸಾಮರಸ್ಯ ಜೀವನ ನಡೆಸಲು ಈ ಕಾಯ್ದೆ ಸಹಕಾರಿಯಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಯಾವುದೇ ದೌರ್ಜನ್ಯ ನಡೆಯದಿದ್ದರು ದುರುದ್ದೇಶದಿಂದ ಮತ್ತು ವೈಯುಕ್ತಿಕ ದ್ವೇಷದಿಂದ ಪ್ರಕರಣಗಳನ್ನು ದಾಖಲಿಸುವುದು ಮತ್ತು ಪೊಲೀಸ್ ಇಲಾಖೆಗೆ ಸಂಘಟನೆಗಳ ಮೂಲಕ ಒತ್ತಡ ಹಾಕುವ ಪ್ರಕರಣಗಳು ನಡೆಯುತ್ತಿರುವುದನ್ನು ಖಂಡಿಸಿದರು.
ಇತ್ತೀಚೆಗೆ ಮಲ್ಲಂದೂರು ಠಾಣಾ ವ್ಯಾಪ್ತಿಯಲ್ಲಿ ಚಿಕ್ಕ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ದೊಡ್ಡದು ಮಾಡಿ ಅನಾವಶ್ಯಕವಾಗಿ ದುರುದ್ದೇಶಪೂರ್ವಕವಾಗಿ ಯುವ ಮುಖಂಡ ಯತೀಶ್ ಗೌಡ ಇಂದಾವರ ಮತ್ತಿತರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ತೋಟದ ಕೆಲಸಕ್ಕೆ ಅಡ್ವಾನ್ಸ್ ತೆಗೆದುಕೊಂಡು ಕೆಲಸಕ್ಕೆ ಬಾರದೇ ಇದ್ದಾಗ ದುಡ್ಡು ವಾಪಾಸ್ಸು ಕೇಳಿದರೆ ಅದಕ್ಕೆ ಅಟ್ರಾಸಿಟಿ ಪ್ರಕರಣ ಹಾಕುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಸಮಾಜದಲ್ಲಿ ಸಾಮಾರಸ್ಯಕ್ಕೆ ದಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ಎಲ್ಲಾ ಸಮುದಾಯ ಮತ್ತು ಸಂಘಟನೆಗಳು ಚಿಂತನೆ ನಡೆಸಬೇಕು. ಅಟ್ರಾಸಿಟಿ ಕಾಯ್ದೆ ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಎಲ್ಲರು ಒಟ್ಟಾಗಬೇಕು. ಅಧಿಕಾರಿಗಳು ಅಟ್ರಾಸಿಟಿ ಪ್ರಕರಣ ದಾಖಲಿಸುವ ಮುನ್ನ ಸೂಕ್ತ ಸಮಾಲೋಚನೆ ನಡೆಸಬೇಕು. ಸುಳ್ಳು ಪ್ರಕರಣ ದಾಖಲಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಗೌಡ ಕಡಿದಾಳು, ಯತೀಶ್ ಗೌಡ ಇಂದಾವರ, ಪೂರ್ಣಿಮಾ ಸುಧೀರ್, ವಕೀಲ ದೀಪಕ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.



