ಸಮಾಜದಲ್ಲಿ ಜನಸಾಮಾನ್ಯರೊಂದಿಗೆ ಇನ್ನಷ್ಟು ಹತ್ತಿರವಾಗಿ ಬೆರೆಯಲು ಅವಕಾಶವಾಗಿ ಸಾಮಾಜಿಕ ಜೀವನ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆಯ ಕೆಲಸದ ಒತ್ತಡದ ನಡುವೆಯೂ ನ್ಯಾಯಾಧೀಶರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಹೇಳಿದರು.
ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರದ ಬಗ್ಗೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಸಂಬಂಧಿಸಿದ ಪೊಲೀಸ್ ಠಾಣೆ, ಜೈಲು ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾನೂನು ಸೇವಾ ಪ್ರಾಧಿಕಾರದ ಅಸ್ತಿತ್ವಕ್ಕೆ ಬರುವ ಮುನ್ನ ಇವೆಲ್ಲ ಇರಲಿಲ್ಲ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ದುರುಪಯೋಗಗಳಾಗಿದ್ದವು. ಹೀಗಾಗಿ ಇದನ್ನು ನಿರ್ವಹಿಸಲು ನ್ಯಾಯಾಧೀಶರುಗಳೇ ಸೂಕ್ತರು ಎಂದು ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಿದರು.
ನೈತಿಕ ಮೌಲ್ಯಗಳು ಹಾಗೂ ನೈತಿಕ ಮಾನದಂಡಗಳನ್ನು ಇರಿಸಿಕೊಂಡಾಗ ವಕೀಲರು ನ್ಯಾಯಾಂಗದ ಒಳಗೆ ಮತ್ತು ಹೊರಗೆ ಸಮಾಜಕ್ಕೆ ಒಳಿತು ಮಾಡಬಹುದು. ದೇವಾಲಯದಲ್ಲಿ ಪಾಣಿಪೀಠದಲ್ಲಿ ದೇವರನ್ನು ಪ್ರತಿಷ್ಠಾಪಿಸಿರುತ್ತಾರೆ. ನಾವು ಪಾಣಿಪೀಠದ ಕೆಳಗೆ ನಿಂತು ದೇವರಿಗೆ ನಮಸ್ಕರಿಸುತ್ತೇವೆ. ಹಾಗೆಯೇ ನ್ಯಾಯಾಲಯದಲ್ಲಿ ಎರಡು ಮೆಟ್ಟಿಲು ಮೇಲಿರುವ ವಕೀಲರು ಪಾಣಿಪೀಠದ ಮೇಲಿದ್ದಂತೆ. ಆ ಭಾವನೆಯಲ್ಲೇ ಜನರು ವಕೀಲರಿಗೆ ನಮಸ್ಕರಿಸುತ್ತಾರೆ.
ವಾಲಯ ಹಾಗೂ ನ್ಯಾಯಾಲಯ ಈ ಎರಡಕ್ಕೂ ಜನರು ವ್ಯತ್ಯಾಸವನ್ನು ಕಾಣುವುದಿಲ್ಲ. ಎಲ್ಲೋ ಕೆಲವರು ನಿಂದಿಸಬಹುದು. ನ್ಯಾಯಾಲಯವನ್ನೇ ಬೈಯ್ಯಬಹುದು. ಆದರೆ ಅದು ಕೇವಲ ಕೆಲವೇ ಮಂದಿ. ಹಾಗೆಯೇ ಅದು ಯಾವುದೋ ನಿರ್ದಿಷ್ಟ ವಿಚಾರಕ್ಕೆ ಸೀಮಿತವಾಗಿರಬಹುದು. ಯಾರು ಏನೇ ಅಂದುಕೊಂಡರೂ ನಮ್ಮ ವ್ಯವಸ್ಥೆ ಬಲವಾಗಿದೆ. ಹೀಗಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಿರ್ವಹಿಸಬೇಕು. ಸಮಾಜಕ್ಕೆ ನಾವು ಕೊಡುಗೆ ನೀಡಬೇಕೆಂದು ದೇವರೇ ನಮಗೆ ಈ ಅವಕಾಶವನ್ನು ಒದಗಿಸಿದ್ದಾನೆ. ವಕೀಲರು ಮೌಲ್ಯವನ್ನು ಅಳವಡಿಸಿಕೊಂಡಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಸ್ವಾಗತಿಸಿದರು. ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಹಿರಿಯ ನ್ಯಾಯಾಧೀಶರು ಮತ್ತಿತರರು ಉಪಸ್ಥಿತರಿದ್ದರು.



