ಇತ್ತೀಚೆಗೆ ನಿಧನರಾದ ಕನ್ನಡ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ನವರಿಗೆ ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಮೂಡಿಗೆರೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಾಹಿತಿಗಳು ಭಾಗವಹಿಸಿ ನುಡಿನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಹಳೇಕೋಟೆ ರಮೇಶ್ ಅವರು ಮಾತನಾಡಿ ; ಎಸ್.ಎಲ್. ಬೈರಪ್ಪನವರು ನಾಡು ಕಂಡ ಅದ್ಭುತ ಬರಹಗಾರರಾಗಿದ್ದರು, ಅವರು 24 ಕಾದಂಬರಿಗಳನ್ನು ಬರೆದಿದ್ದಾರೆ. ಅವೆಲ್ಲವೂ ಪ್ರಸಿದ್ಧಿ ಪಡೆದಿವೆ. ಅವರು ತಮ್ಮ ಸಾಹಿತ್ಯದಲ್ಲಿ ಭಾರತದ ಸಂಸ್ಕೃತಿ, ಜನಜೀವನವನ್ನು ಪ್ರತಿಬಿಂಬಿಸಿದ್ದರು. ಪ್ರತಿಯೊಂದು ಕೃತಿ ಬರೆಯುವಾಗಲೂ ಅವರು ದೇಶದ ಉದ್ದಗಲ ಮಾತ್ರವಲ್ಲಿ ವಿದೇಶಗಳಲ್ಲಿಯೂ ತಿರುಗಾಟ ನಡೆಸಿ ಅಧ್ಯಯನ ಪೂರ್ಣವಾದ ವಿಚಾರಗಳನ್ನು ಮಂಡಿಸುತ್ತಿದ್ದರು ಎಂದರು.

ಕ.ಸಾ.ಪ. ಹೋಬಳಿ ಕಾರ್ಯದರ್ಶಿ ಮತ್ತು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನವೀನ್ ಮತನಾಡಿ ; ಎಸ್.ಎಲ್. ಬೈರಪ್ಪನವರು ನೇರ ನಿಷ್ಠುರವಾದ ವ್ಯಕ್ತಿತ್ವ ಹೊಂದಿದ್ದರು. ಅವರು ತಮ್ಮ ಕೃತಿಗಳ ಮೂಲಕ ಭಾರತದ ಚರಿತ್ರೆಯನ್ನು ಪುನರಾವಲೋಕನ ಮಾಡಿದ್ದರು. ರಾಮಾಯಣ, ಮಹಾಭಾರತವನ್ನು ವಾಸ್ತವ ನೆಲೆಗಟ್ಟಿನಲ್ಲಿ ಕೃತಿ ರೂಪಕ್ಕೆ ಇಳಿಸಿದ್ದರು. ಯಾವುದೇ ಟೀಕೆ ಟಿಪ್ಪಣಿಗಳಿಂದ ಅವರು ವಿಚಲಿತರಾಗದೇ ತಮ್ಮ ವಿಚಾರಗಳನ್ನು ಕೃತಿಗಳ ರೂಪದಲ್ಲಿ ಪ್ರಕಟಿಸಿದರು ಎಂದರು.
ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ತಾಲ್ಲೂಕು ಗೌರವ ಕಾರ್ಯದರ್ಶಿ ಸುಚಿತ್ರ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಸಂಭ್ರಮ ಅಧ್ಯಕ್ಷ ಎಂ.ಎಸ್. ನಾಗರಾಜು, ಕ.ಸಾ.ಪ. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಶ್ರೀಮತಿ ನಿರ್ಮಲಾ ಮಂಚೇಗೌಡ, ಜಿಲ್ಲಾ ಕಸಾಪ ಸಂಚಾಲಕಿ ಶ್ರೀಮತಿ ವಿಶಾಲ ನಾಗರಾಜ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ರವಿ ಕುನ್ನಹಳ್ಳಿ, ಗೋಣಿಬೀಡು ಹೋಬಳಿ ನಿಯೋಜಿತ ಅಧ್ಯಕ್ಷ ನವೀನ್ ಆನೆದಿಬ್ಬ, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಚಂದ್ರು ಒಡೆಯಾರ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ರೇಖಾ ರವಿರಾಜ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ಅನಿತಾ ಜಗದೀಪ್, ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.



