ವಿದ್ಯುತ್ ಅವಘಡದಲ್ಲಿ ವಿದ್ಯುತ್ ಗುತ್ತಿಗೆದಾರರೊಬ್ಬರು ಕೊನೆಯುಸಿಳೆದಿರುವ ದಾರುಣ ಘಟನೆ ನಡೆದಿದೆ. ಕಳಸ ಪಟ್ಟಣದ ವಿದ್ಯುತ್ ಗುತ್ತಿಗೆದಾರ ಮಹಮ್ಮದ್ ಇಸ್ಮಾಯಿಲ್ (42 ವರ್ಷ) ಎಂಬುವವರು ಆಕಸ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದುರ್ದೈವಿ.
ಮಂಗಳವಾರ ಸಂಜೆ ಕಳಸ ಸಮೀಪದ ಕೋಟೆಹೊಳೆ ಕರಿಮನೆ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ನಡೆಯುವ ವೇಳೆ ಗುಡುಗು ಸಿಡಿಲು ಸಹಿತ ವಿಪರೀತ ಮಳೆ ಬರುತ್ತಿತ್ತು. ಕರಿಮನೆ ಸಮೀಪ ಮನೆಯೊಂದರ ವಿದ್ಯುತ್ ವಯರಿಂಗ್ ಗುತ್ತಿಗೆ ಹಿಡಿದಿದ್ದ ಇಸ್ಮಾಯಿಲ್ ಮನೆಗೆ ಕಂಬದಿಂದ ಮೈನ್ಸ್ ವಯರ್ ಎಳೆಯುವ ಹಂತದಲ್ಲಿ ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ತಂತಿಗೆ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿದ್ಯುತ್ ಅವಘಡದಲ್ಲಿ ಇಸ್ಮಾಯಿಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಇಸ್ಮಾಯಿಲ್ ಕಳಸ ಮೂಲದವರಾಗಿದ್ದು, ಇವರ ಕುಟುಂಬ ಕೆಲ ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ವಾಸವಾಗಿತ್ತು ಎನ್ನಲಾಗಿದೆ. ಇಸ್ಮಾಯಿಲ್ ಕಳೆದ 20 ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು, ಕಳಸ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಮೂಡಿಗೆರೆ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಸೌಮ್ಯ ಸ್ವಭಾವದ ಸಹೃದಯಿ ವ್ಯಕ್ತಿತ್ವ ಹೊಂದಿದ್ದರು.
ಇವರು ಪೋಷಕರು, ಪತ್ನಿ, ಚಿಕ್ಕ ಮಗುವನ್ನು ಅಗಲಿದ್ದಾರೆ. ಇಸ್ಮಾಯಿಲ್ ಅಕಾಲಿಕ ಅಗಲಿಕೆಗೆ ಕಳಸ ಭಾಗದ ಜನರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಹಾಗೂ ಕಳಸ ಭಾಗದ ವಿದ್ಯುತ್ ಗುತ್ತಿಗೆದಾರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಸ್ಮಾಯಿಲ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



