ಕಾಳುಮೆಣಸು ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಮತ್ತು ಸಾಧನೆಗಾಗಿ ಭಾರತದ ಅತ್ಯುತ್ತಮ ಕಾಳುಮೆಣಸು ಬೆಳೆಗಾರ ಪ್ರಶಸ್ತಿಗೆ ಚಿಕ್ಕಮಗಳೂರು ಹಾಸನ ಗಡಿಭಾಗದ ಚೀಕನಹಳ್ಳಿಯ ಬೆಳೆಗಾರ ಕೃಷ್ಣಕುಮಾರ್ (ಕೃಷ್ಣೇಗೌಡ) ಭಾಜನರಾಗಿದ್ದಾರೆ.
ಕೆರಳದ ಕೊಚ್ಚಿನ್ ನಲ್ಲಿ ನಡೆಯುತ್ತಿರುವ 3 ದಿನಗಳ ಇಂಟರ್ ನ್ಯಾಷನಲ್ ಪೆಪ್ಪರ್ ಕಮ್ಯುನಿಟಿ 53ನೇ ಅಧಿವೇಶನದಲ್ಲಿ ಭವ್ಯ ಸಮಾರಂಭದಲ್ಲಿ ಕೃಷ್ಣಕುಮಾರ್ ಅವರಿಗೆ 2024ನೇ ಸಾಲಿನ ಭಾರತದ ಅತ್ಯುತ್ತಮ ಕಾಳುಮೆಣಸು ಬೆಳೆಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾವೇಶದಲ್ಲಿ ಪ್ರಪಂಚದ ಅತಿಹೆಚ್ಚು ಕಾಳುಮೆಣಸು ಬೆಳೆಯುವ ಪ್ರಮುಖ ದೇಶಗಳಾದ ಭಾರತ, ವಿಯೆಟ್ನಾಮ್, ಶ್ರೀಲಂಕಾ, ಇಂಡೋನೇಷಿಯಾ, ಮಲೇಷಿಯಾ, ಫಿಲಿಪೈನ್ಸ್, ಫಪುವ ನ್ಯೂಗಿನಿ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. 1972 ರಲ್ಲಿ ಪ್ರಾರಂಭವಾಗಿರುವ ಇಂಟರ್ ನ್ಯಾಷನಲ್ ಪೆಪ್ಪರ್ ಕಮ್ಯುನಿಟಿ(IPC) ಸಂಘಟನೆ ಪ್ರತಿವರ್ಷ ಮೇಲಿನ ಒಂದೊಂದು ದೇಶದಲ್ಲಿ ಅಂತರಾಷ್ಟ್ರೀಯ ಸಮಾವೇಶವನ್ನು ಏರ್ಪಡಿಸುತ್ತದೆ.

ಈ ಸಮಾವೇಶದಲ್ಲಿ ಪ್ರತಿ ವರ್ಷ ಪ್ರತಿ ದೇಶದಿಂದ ಓರ್ವ ಕಾಳುಮೆಣಸು ಬೆಳೆಗಾರರನ್ನು ಆಯ್ಕೆಮಾಡಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಪ್ರತಿ ಎಕರೆಗೆ ಸರಾಸರಿ ಇಳುವರಿ, ಬೇಸಾಯದ ಗುಣಮಟ್ಟ ಮತ್ತು ನಿರ್ವಹಣೆ ಈ ಅಂಶಗಳನ್ನು ಗಮನಿಸಿ ಪ್ರಶಸ್ತಿಗೆ ರೈತರನ್ನು ಆಯ್ಕೆ ಮಾಡಲಾಗುತ್ತದೆ.
2024ನೇ ಸಾಲಿನಲ್ಲಿ ಮಲೆನಾಡಿನ ಹೆಮ್ಮಯ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಾದ ಕೃಷ್ಣಕುಮಾರ್ ಅವರು ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮೂಡಿಗೆರೆ ಬೇಲೂರು ರಸ್ತೆಯಲ್ಲಿ ಚೀಕನಹಳ್ಳಿ ಗ್ರೋವರ್ಸ್ ಕೆಫೆ ಸಮೀಪ ಹೆದ್ದಾರಿ ಬದಿಯಲ್ಲಿ ಇರುವ 5 ಎಕರೆ ತೋಟವನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಪ್ರತಿ ಎಕರೆಗೆ ಸರಾಸರಿ 2 ಟನ್ ನಂತೆ 5 ಎಕರೆ ಪ್ರದೇಶದಲ್ಲಿ ದಾಖಲೆಯ 10 ಟನ್ ಒಣ ಕಾಳುಮೆಣಸು ಇಳುವರಿ ಪಡೆದಿದ್ದ ಕೃಷ್ಣಕುಮಾರ್ ಅವರ ಅನುಪಮ ಸಾಧನೆ ಅಂತರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿದೆ.
ಕೃಷ್ಣಕುಮಾರ್ ಅವರು ಸುಮಾರು 250 ಎಕರೆ ಕಾಫಿ ತೋಟದಲ್ಲಿ ಕಾಳುಮೆಣಸು ಬೆಳೆದಿದ್ದು, ಕಳೆದ ವರ್ಷ 100ಟನ್ ಕಾಳುಮೆಣಸು ಕೊಯ್ಲು ಮಾಡಿದ್ದಾರೆ. ಈ ಸಾಲಿನಲ್ಲಿ 110 ಟನ್ ಇಳುವರಿಯ ಅಂದಾಜು ಮಾಡಿದ್ದಾರೆ.
ಬೇಲೂರು ತಾಲ್ಲೂಕು ಯಮಸಂಧಿ ಮೂಲದ ವೈ.ಡಿ. ನಂಜೇಗೌಡ ಅವರ ಪುತ್ರರಾದ ವೈ.ಎನ್. ಕೃಷ್ಣಕುಮಾರ್ ಚೀಕನಹಳ್ಳಿ ಸೇರಿದಂತೆ ವಿವಿಧೆಡೆ ದೊಡ್ಡ ಪ್ರಮಾಣದ ಕಾಫಿ ಎಸ್ಟೇಟ್ ಗಳನ್ನು ಹೊಂದಿದ್ದಾರೆ.
ತಮ್ಮ ಕಾಫಿ ತೋಟಗಳಲ್ಲಿ ಕಾಫಿ ಜೊತೆಗೆ ಕಾಳುಮೆಣಸು ಬೆಳೆಯನ್ನು ಅಂತರಬೆಳೆಯಾಗಿ ಬೆಳೆದು ದೊಡ್ಡ ಯಶಸ್ಸು ಕಂಡಿದ್ದಾರೆ.
ಪ್ರಸ್ತುತ 100 ಟನ್ ಕಾಳುಮೆಣಸು ಬೆಳೆದು ಭಾರತದಲ್ಲಿಯೇ ಅತಿಹೆಚ್ಚು ಕಾಳುಮೆಣಸು ಬೆಳೆಯುವ ಬೆಳೆಗಾರರೆಂಬ ಹೆಗ್ಗಳಿಕೆ ಪಡೆದಿದ್ದಾರೆ.
ಪ್ರಶಸ್ತಿ ಬಂದ ಸಂದರ್ಭದಲ್ಲಿ ದರ್ಪಣ ಪತ್ರಿಕೆಯೊಂದಿಗೆ ಮಾತನಾಡಿದ ಕೃಷ್ಣಕುಮಾರ್ ಅವರು ; ತಾವು ಕಾಫಿ ಬೆಳೆಯಲ್ಲಿ ಅಂತರಬೆಳೆಯಾಗಿ ಕಾಡುಮರಗಳು, ಸಿಲ್ವರ್ ಓಕ್ ಮುಂತಾದ ಮರಗಳಿಗೆ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸಿದ್ದೇವೆ. ಸಾವಯವ ಮತ್ತು ರಾಸಾಯನಿಕ ವಿಧಾನಗಳನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿಯಿಂದ ಕಾಳುಮೆಣಸು ಬೆಳೆದಿದ್ದೇವೆ. ಕೃಷಿ ತಜ್ಞರಾದ ಡಾ. ವೇಣುಗೋಪಾಲ್, ಡಾ.ಅಂಕೇಗೌಡ ಅವರ ಮಾರ್ಗದರ್ಶನವು ಸಹಾಯಕವಾಗಿದೆ. ವೈರಸ್ ರಹಿತವಾದ ಬಳ್ಳಿಗಳನ್ನು ನೆಟ್ಟು ಆದಷ್ಟು ರೋಗರಹಿತವಾದ ಬಳ್ಳಿಗಳನ್ನು ಬೆಳೆಯಲಾಗುತ್ತಿದೆ. ನನಗೆ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷವಾಗಿದ್ದು, ಇದು ಇಡೀ ಕಾಫಿ ಮತ್ತು ಕಾಳುಮೆಣಸು ಸಮುದಾಯದಕ್ಕೆ ಸಂದ ಗೌರವವಾಗಿದೆ ಎಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೃಷ್ಣಕುಮಾರ್ ಅವರ ಪುತ್ರ ಈಶ್ವರ್ ಅವರು ತಂದೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಎಸ್ಸಿ ಅಗ್ರಿ ಪದವಿದರರಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್ ತೋಟಕ್ಕೆ ಹಿಂದಿರುಗಿದ ನಂತರ ಅನೇಕ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಕಾಫಿ ಮತ್ತು ಕಾಳುಮೆಣಸು ಬೆಳೆಯಲ್ಲಿ ಉತ್ಕೃಷ್ಟವಾದ ಫಲಿತಾಂಶ ಕಾಣುತ್ತಿದ್ದಾರೆ.
ಅಂತರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ವೈ.ಎನ್. ಕೃಷ್ಣಕುಮಾರ್ ಅವರ ಸಾಧನೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.



