ರಾಷ್ಟ್ರಭಕ್ತಿ ಅಭಿವ್ಯಕ್ತಗೊಳಿಸುವ ಪಂಚಾಕ್ಷರಿ ಮಂತ್ರವೇ ವಂದೇಮಾತರಂ ಎಂದು ಬಸವತತ್ವಪೀಠದ ಅಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ದಸ್ವಾಮೀಜಿ ಅಭಿಪ್ರಾಯಿಸಿದರು.
‘ವಂದೇ ಮಾತರಂ-150’ ಆಚರಣಾ ಸಮಿತಿ ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯಗೀತೆಗೆ ಸಾಂಸ್ಕøತಿಕ ನಮನದ ಸಂಭ್ರಮಾಚರಣೆ ಶತಕಂಠಗಾಯನ ಸಂಗೀತ ನೃತ್ಯ ಸಾಂಸ್ಕøತಿಕ ವೈಭವದ ವಿಶಿಷ್ಟ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಬಂಕಿಮಚಂದ್ರ ಚಟರ್ಜಿ ಅವರು ವಂದೇ ಮಾತರಂ ಮೌಲಿಕಗೀತೆಯನ್ನು ತಾಯಿಯ ಸ್ವರೂಪದಲ್ಲಿ ರಚಿಸಿದ ಹೃದಯಗೀತೆ ಇದು ಹೆಚ್ಚು ಪ್ರಚಾರಕ್ಕೆ ಬಂದಿದ್ದು ನಮ್ಮ ತಾಯಿ ಪರಕೀಯರ ಕೈಯಲ್ಲಿ ನಲುಗುತ್ತಿದ್ದಾಳೆಂದು ಭಾರತೀಯರಿಗೆ ಅರಿವಾದಾಗ. ಬಂಗಾಳವನ್ನು ಒಡೆದಾಳುವ ಸ್ಥಿತಿಯಲ್ಲಿ ಗಟ್ಟಿಧ್ವನಿಯ ಆಶಯವಾಗಿ ಸಿಕ್ಕಿದ ಗೀತೆ ಮುಂದೆ ಸ್ವಾತಂತ್ರ್ಯಚಳುವಳಿಯ ನುಡಿಗಟ್ಟಾಯಿತು ರಾಷ್ಟ್ರಭಕ್ತಿಯ ಅಭಿವ್ಯಕ್ತಿ ಮೌಲಿಕವಾದ ಗೀತೆಯಾಗಿ ಹೊಮ್ಮಿತೆಂದರು.
ವಂದೇ ಮಾತರಂ ಭಾಗಗಳಾಗಿ ವಿಂಗಡಿಸಬಹುದು. ಪಲ್ಲವಿ ಮತ್ತು ಮೊದಲಚರಣದಲ್ಲಿ ಸಸ್ಯಶ್ಯಾಮಲಾಂ, ಶುಭ್ರಜ್ಯೋತ್ಸ್ನಾ, ಪುಲ್ಲಕುಸುಮಿತ ದ್ರುಮದಲ ಶೋಭಿನಿ, ಸುವಾಸಿನಿ, ಸುಮಧುರಭಾಷಿನಿ, ಸುಖದಾಂ, ವರದಾ ಮಾತೆ ಎಂಬ ಬಣ್ಣನೆ ಸುಂದರವಾಗಿ ಮೂಡಿಬಂದಿದೆ.
ಮಧ್ಯಭಾಗದಲ್ಲಿ ಕೋಟಿ ಕೋಟಿ ಕಂಠನಿನಾದ, ಕೋಟಿ ಕೋಟಿ ಭುಜಬಲ ಕೈ ಹೊಂದಿದ್ದರೂ ಪರಕೀಯರ ಬಾಹುಗಳಲ್ಲಿ ಸಿಲುಕಿ ನಲುಗುತ್ತಿರುವ ದೈನತೆ ಹೇಳುವ ಜೊತೆಗೆ ಅಬಲೆಯಲ್ಲ ಎಂಬ ಭಾವವೂ ತುಳುಕುತ್ತದೆ. ನೀನು ವಿದ್ಯೆ, ನೀನು ಧರ್ಮ, ಹೃದಯ, ಮರ್ಮ, ಪ್ರಾಣಾಶರೀರ, ಬಾಹುಬಲದ ಶಕ್ತಿ, ಹೃದಯದ ಭಕ್ತಿ ಎನ್ನುತ್ತಾ ಆತ್ಮಸ್ಥೈರ್ಯವನ್ನು ರೂಪಿಸುವ ಸಂಗತಿಗಳಿವೆ. ಜಗತ್ತಿನ ಎಲ್ಲೆಲ್ಲಿ ಪ್ರತೀಮಾರೂಪದಲ್ಲಿ ಪೂಜೆಸಲ್ಪಡುತ್ತಿದೆಯೋ ಅಲ್ಲೆಲ್ಲ ನೀನೆ ಇದ್ದಿಯಾ ಎಂದು ವಿವರಿಸಲಾಗಿದೆ.
ಕೊನೆಯ ಚರಣಗಳಲ್ಲಿ ಶ್ಯಾಮಲೆ, ಸರಳೆ, ಸುಶ್ಮಿತೆ, ಭೂಷಿತೆ ಎಂದೆಲ್ಲ ಭಾರತಮಾತೆಯನ್ನು ವರ್ಣಿಸುವ ಕವಿ ಅವಕಾಶ ಸಿಕ್ಕಾಗ ರಾಕ್ಷಸರನ್ನು ಸಂಹರಿಸುವ ದುರ್ಗಾದೇವಿ ಅಷ್ಟೇ ಅಲ್ಲ ಏನೂ ಇಲ್ಲದಾಗ ಪರಮಶಾಂತಮಾತೆಯಾಗಿ ಕಂಗೊಳಿಸುತ್ತಿಯಾ. ಸಮುದ್ರದ ಮೇಲ್ಭಾಗದಲ್ಲಿ ಅಲೆಗಳ ಹಬ್ಬರವಿದ್ದರೆ, ಆಳದಲ್ಲಿ ಶಕ್ತಿ, ಸಂಪತ್ತು, ವಿದ್ವತನ್ನೊಳಗೊಂಡ ಪರಮಶಾಂತಳೆಂದು ವರ್ಣಿಸುವ ಅಪರೂಪದ ಗೀತೆ ಇದೆಂದು ಸ್ವಾಮೀಜಿ ಬಣ್ಣಿಸಿದ ಸ್ವಾಮೀಜಿ, ನಮ್ಮ ದೇಶದ ಮೂಲಸ್ವರೂಪ ವಿಶ್ವವೇ ವಸುದೈವ ಕುಟುಂಬ ಎಂಬ ಸಂದೇಶÀಹೊತ್ತ ಅಮೃತಗಾಯನ. ಮಾತೆಯ ಉದಾತ್ತ ದೃಷ್ಟಿಯಿಂದ ಹಾಡಬಹುದಾದ ಭಕ್ತಿಗೀತೆಯೂ ಇದೆಂದು ನುಡಿದರು.
ವಿಧಾನಪರಿಷತ್ತು ಸದಸ್ಯ ಸಿ.ಟಿ.ರವಿ ಮಾತನಾಡಿ ವಂದೇ ಮಾತರಂ ಬರೀ ಶಬ್ದವಲ್ಲ, ಅದೊಂದು ಮಂತ್ರ. ಸ್ವಾತಂತ್ರ್ಯಕ್ಕಾಗಿ ದುಡಿಯುವ, ಬದುಕುವ, ಮಡಿಯುವ ಮಂತ್ರವಾಗಿ ಪ್ರೇರಕಶಕ್ತಿಯಾಗಿದೆ. ಅದರ ನೆನಪು ಕಟ್ಟಿಕೊಡುವ ಪುಟ್ಟಪ್ರಯತ್ನ ಅಭಿನಂದನಾರ್ಹ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕಪ್ರಮುಖ್ ಪ್ರವೀಣಕುಮಾರ್ ಉಪನ್ಯಾಸ ನೀಡಿ ಕವಿ ಬಂಕಿಮಚಂದ್ರಚಟರ್ಜಿ ಅವರು ವಂದೇ ಮಾತರಂ ಗೀತೆಯನ್ನು ದೇಶಕ್ಕೆ ನೀಡಿ 150ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ನೆನಪಿಸಿಕೊಳ್ಳುವ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಸಂಸ್ಕøತಿಯ ಭಗವದ್ಗೀತೆ, ವಚನ, ದಾಸರಪದಗಳು ಸಾರಿರುವಂತೆ ವಂದೇ ಮಾತರಂ ಗೀತೆಯೂ ದೇಶವನ್ನು ತಿದ್ದಿ ಸರಿದಾರಿಗೆ ತರಬಹುದೆಂಬುದನ್ನು ಪ್ರೇರಣಾದಾಯಕ ಶಕ್ತಿಯಾಗಿ ರೂಪುಗೊಂಡಿದೆ ಎಂದರು.
ಸ್ವತಂತ್ರದ ಕಿಚ್ಚನ್ನು ಪ್ರತಿಯೊಬ್ಬ ಭಾರತೀಯನಲ್ಲೂ ಬಡಿದ್ದೆಬ್ಬಿಸಿದ ಹಾಡಿದು. ಪೂರ್ವಾರ್ಧ ನಲಿವಿನ ಕಥೆಯಾದರೆ, ಗೀತೆಯ ಉತ್ತಾರಾರ್ಧ ನೋವಿನ ವ್ಯಥೆಯಿಂದ ಕೂಡಿದೆ. ದಿವ್ಯತೆ ಪ್ರಕಟಣೆಯ ಗೀತೆ ರಾಷ್ಟ್ರೀಯತೆಯನ್ನು ಸಾರುತ್ತದೆ. ದೇಶ ಎಂದೂ ಮರೆಯದ ಸಂದೇಶ ನೀಡುವ ವಂದೇ ಮಾತರಂ ಭಾರತೀಯರಷ್ಟೇ ಅಲ್ಲ ಜಗತ್ತಿನ ಜನರೆಲ್ಲರೂ ಮುಂದೊಂದು ದಿನ ಈ ಗೀತೆ ಹಾಡುವುದು ನಿಶ್ಚಿತ ಎಂದರು.
ಸುಗಮಸಂಗೀತ ಗಂಗಾ ಅಧ್ಯಕ್ಷ ಡಾ||ಜೆ.ಪಿ.ಕೃಷ್ಣೇಗೌಡ ಮಾತನಾಡಿ ವಂದೇ ಮಾತರಂ ದೇಶಪ್ರೇಮದ ಪ್ರತೀಕ. ಯಾವುದೇ ಭಿನ್ನಬೇಧವಿಲ್ಲದೆ ದೇಶವಾಸಿಗಳೆಲ್ಲರೂ ಗೌರವಿಸುವ ಆದರಿಸುವ ಅಪೂರ್ವ ಮಂತ್ರ ವಂದೇ ಮಾತರಂ ಎಂದರು.
ಸಂಸ್ಕಾರಭಾರತಿಯ ಗೌರವಾಧ್ಯಕ್ಷ ಬಿ.ಆರ್.ಸಚ್ಚಿದಾನಂದ ಸ್ವಾಗತಿಸಿ, ಸುಗಮಸಂಗೀತಗಂಗಾದ ಗಾಯಕಿ ಸುಮಾಪ್ರಸಾದ್ ನಿರೂಪಿಸಿ, ಉಪಾಧ್ಯಕ್ಷ ಸ.ಗಿರಿಜಾಶಂಕರ್ ಸ್ವಾಮೀಜಿ ಅವರನ್ನು ಗೌರವಿಸಿದರು.
ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ಕಿನ್ನಾಳಿಶೈಲಿಯ ಕಲಾಕೃತಿಗಳ ಪ್ರದರ್ಶನವನ್ನು ಇದೇ ಸಂದರ್ಭದಲ್ಲಿ ವಿಶ್ವಕರ್ಮ ಆಚಾರ್ಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ನಾದಚೈತನ್ಯದ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಅರವಿಂದದೀಕ್ಷಿತ್, ಮಲ್ಲಿಗೆಸುಗಮಸಂಗೀತ ಟ್ರಸ್ಟ್ ಅಧ್ಯಕ್ಷ ಮಲ್ಲಿಗೆಸುಧೀರ್, ಪೂರ್ವಿ ಸುಗಮಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಎಂ.ಎಸ್.ಸುಧೀರ್, ಜೈನಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ವಂದೇ ಮಾತರಂ ಟ್ರಸ್ಟ್‍ನ ಪ್ರೀತಮ್, ವಿವೇಕಜಾಗೃತ ಬಳಗದ ಅಧ್ಯಕ್ಷ ನಂಜುಂಡಪ್ಪ, ಕೌಶಲ್ಯ ಮಹಿಳಾ ಮಂಡಳಿಯ ಜ್ಯೋತಿಪೈ, ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ವಿವಿಧ ಸಂಗೀತ-ನೃತ್ಯ ಕಲಾ ಶಾಲೆಯ ಮುಖ್ಯಸ್ಥರುಗಳಾದ ಸುಮನಾರಾಮಚಂದ್ರ, ವೀಣಾಅರವಿಂದ, ರೂಪಾಅಶ್ವಿನ್, ರೇಖಾಪ್ರೇಂಕುಮಾರ್, ಜ್ಯೋತಿಪ್ರಕಾಶ್, ಉಷಾ, ಶರ್ಮಿಳಾ, ಪದ್ಮಾಚಂದ್ರಶೇಖರ್, ಗೀತಾಸತೀಶ್, ಜ್ಯೋತಿರಮೇಶ್, ಪವಿತ್ರಾದೀಪಕ್ ಸುಗಮಸಂಗೀತ ಗಂಗಾದ ಕಾರ್ಯದರ್ಶಿ ಮಂಜುನಾಥ್ ಕಾಮತ್, ರಾಯನಾಯ್ಕ, ದುರ್ಗಾಭಗಿನಿ ತಂಡ, ಸ್ನೇಹಾ, ನವೀತಾ, ಯಶವಂತ್, ಶರತ್ ಮತ್ತಿತರರೊಂದಿಗೆ ಮುಖ್ಯಅತಿಥಿಗಳು ಜ್ಯೋತಿ ಬೆಳಗಿ ಸಮಾರಂಭ ಉದ್ಘಾಟಿಸಿದರು.



