ಹವಾಮಾನ ಆದಾರಿತ ಬೆಳೆವಿಮೆ ಯೋಜನೆಯಲ್ಲಿ ರೈತರನ್ನು ಕತ್ತಲೆಯಲ್ಲಿಡುತ್ತಿದ್ದು, ಯಾವ ಮಾನದಂಡದಲ್ಲಿ ವಿಮೆಯನ್ನು ನೀಡಲಾಗುತ್ತಿದೆ ಅಥವಾ ನೀಡಲಾಗುತ್ತಿಲ್ಲ ಎಂಬುದರ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಆಗ್ರಹಿಸಿದ್ದಾರೆ.
ಇವರು ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ : ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹವಾಮಾನಾಧಾರಿತ ಬೆಳೆ ವಿಮೆ (WBCI) ಯೋಜನೆಗೆ ಸಂಬಂಧಿಸಿದಂತೆ ರೈತರಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿವೆ. ಕಳೆದ ಸಾಲಿನಲ್ಲಿ ಬಹುತೇಕ ಕಡೆ ಅತಿವೃಷ್ಟಿಯಾಗಿದ್ದು, ಆದರೆ ರೈತರಿಗೆ ವಿಮಾ ಮೊತ್ತ ಪಾವತಿಯಾಗಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆಮಾಪನ ಕೇಂದ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ರೈತರು ವಿಮೆಯಿಂದ ವಂಚಿತರಾಗಿದ್ದಾರೆ. ಸಂಬಂಧಿಸಿದ ಇಲಾಖೆ ಮತ್ತು ವಿಮಾ ಕಂಪನಿಗಳು ಇದಕ್ಕೆ ಜವಾಬ್ದಾರಿಯಾಗಿರುತ್ತದೆ. ಇದರ ಹೊಣೆಯನ್ನು ರೈತರು ಹೊರಲು ಬರುವುದಿಲ್ಲ. ಹಾಗಾಗಿ ತಕ್ಷಣ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ವಿಮಾ ಮೊತ್ತವನ್ನು ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ ಮೂಡಿಗೆರೆ ತಾಲ್ಲೂಕು ಕಛೇರಿಯಲ್ಲಿ ತಹಸೀಲ್ದಾರ್ ಅವರ ನೇತೃತ್ವದಲ್ಲಿ ಈ ಬಗ್ಗೆ ತೋಟಗಾರಿಕಾ ಇಲಾಖೆ ಕರೆದಿದ್ದ ಸಭೆಯಲ್ಲಿ ಬೆಳೆಗಾರರ ಸಂಘದಿಂದ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಅಹವಾಲು ಸಲ್ಲಿಸಿದ್ದು ಹಲವು ವಿಚಾರಗಳ ಬಗ್ಗೆ ಗಮನ ಸೆಳೆಯಲಾಗಿದೆ ಎಂದರು.
ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆನಷ್ಟದ ಅಂದಾಜು ಪ್ರಕ್ರಿಯೆ ಹಾಗೂ ನಷ್ಟಕ್ಕೆ ನೀಡಲಾಗುವ ವಿಮೆ, ಯಾವ ಮಾನದಂಡವನ್ನಾಧರಿಸಿ ಲೆಕ್ಕಾಚಾರ ಮಾಡುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದ್ದು, ನಷ್ಟದ ಪ್ರಮಾಣವನ್ನು ಅಂದಾಜುಮಾಡುವ ಮಾನದಂಡಗಳು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು ಇದನ್ನು ಗ್ರಾಮ ಮಟ್ಟಕ್ಕೆ ವಿಕೇಂದ್ರೀಕರಣಗೊಳಿಸಿ, ಗ್ರಾಮ ಮಟ್ಟದಲ್ಲಿ ನಷ್ಟದ ಪ್ರಮಾಣ ಅಂದಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಹಾಗೂ ಗ್ರಾಮ ಮಟ್ಟದಲ್ಲಿ ಉಂಟಾಗುವ ನಷ್ಟಕ್ಕೆ ಅನುಗುಣವಾಗಿ ಪರಿಗಣಿಸಿ ವಿಮೆ ನೀಡಬೇಕು.
ಪಂಚಾಯಿತಿ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಹವಾಮಾನ ಮಾಹಿತಿ ಸಂಗ್ರಹಣಾ ಘಟಕವನ್ನು ಸ್ಥಾಪಿಸುವುದಕ್ಕೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಕಂಡುಬಂದಲ್ಲಿ ಬೆಳೆಗಾರರ ಸಂಘಟನೆಯ ವತಿಯಿಂದ ಸ್ಥಳೀಯ ಉತ್ಸಾಹಿ ಬೆಳೆಗಾರರ ತೋಟಗಳಲ್ಲಿ ಕ್ರಮಬದ್ಧ/ನಿಯಮಬದ್ಧವಾಗಿ ಘಟಕಗಳನ್ನು ಸ್ಥಾಪಿಸಲು ಬೆಳೆಗಾರರ ಸಂಘದ ಸಹಕಾರವಿದೆ. ತೀವ್ರ ಗಾಳಿಯಿಂದ ಉಂಟಾಗುವ ಅನಾಹುತ ಹಾಗೂ ನಷ್ಟಗಳನ್ನು ಕೂಡ ವಿಮಾ ಯೋಜನೆಯಲ್ಲಿ ಪರಿಗಣಿಸಬೇಕು.
ವಿಮೆಯ ಪ್ರೀಮಿಯಂ ಮತ್ತು ಪೇಔಟ್ ಅವಧಿಯನ್ನು ಸಂಕ್ಷಿಪ್ತವಾಗಿ ಬೆಳೆಗಾರರಿಗೆ ತಿಳಿಸಿರಬೇಕು ಮತ್ತು ನಿಗದಿತ ಅವಧಿಯಲ್ಲಿಯೇ ವಿಮೆಯನ್ನು ದೊರಕಿಸಿಕೊಡುವ ವ್ಯವಸ್ಥೆ ನಿಯಮಾನುಸಾರವಾಗಿ ಆಗಬೇಕು. ಕಾರಣ ವಿಮೆಯ ನಿಗದಿತ ಅವಧಿ ಪೂರ್ಣಗೊಂಡಿದ್ದರೂ ಕೂಡ ವಿಮೆ ಹಣ ನೀಡುವಲ್ಲಿ ಮೂರ್ನಾಲ್ಕು ತಿಂಗಳಿಗಿಂತಲು ಹೆಚ್ಚು ವಿಳಂಬವಾಗುತ್ತಿದೆ.
ಬ್ಯಾಂಕ್‌ಗಳು ಕೇವಲ ವಿಮೆಯ ಪ್ರೀಮಿಯಂ ಸಂಗ್ರಹ ಮಾಡಿಕೊಳ್ಳುತ್ತಿವೆಯೇ ಹೊರತು ವಿಮೆ ಸಂಬಂಧ ಮಾಹಿತಿ ದೊರಕಿಸಿಕೊಡುತ್ತಿಲ್ಲ. ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ವಿಮಾ ಸಂಸ್ಥೆಯ ನೋಡೆಲ್ ಅಧಿಕಾರಿಯನ್ನು ನೇಮಿಸಿ ಪ್ರಾದೇಶಿಕ ಕಚೇರಿಗಳನ್ನು ತೆರೆದು ಮಾಹಿತಿ ನೀಡುವ ಕೆಲಸ ಆಗಬೇಕು.
ವಿಮೆಯ ಪ್ರೀಮಿಯಂ ಪಾವತಿಸಿಕೊಂಡ ಬಳಿಕ ಪ್ರತೀ ತಿಂಗಳ ಕೊನೆಯಲ್ಲಿ ಅಥವಾ ನಂತರ ಪ್ರಾರಂಭವಾಗುವ ತಿಂಗಳ ಮೊದಲ ವಾರದಲ್ಲಿ ವಿಮೆಗೆ ಪೂರಕವಾದ ಹವಾಮಾನ ಇತ್ತೋ/ಇಲ್ಲವೋ ಎಂಬುದರ ಬಗ್ಗೆ ಪ್ರತೀ ತಿಂಗಳು ರೈತ ಬೆಳೆಗಾರರಿಗೆ ಸಾಮಾಜಿಕ ತಾಣಗಳ ಮೂಲಕ (ವಾಟ್ಸಪ್) ಗ್ರಾಮಗಳ ಹೆಸರುಗಳನ್ನೊಳಗೊಂಡಂತೆ ಮಾಹಿತಿ ನೀಡಬೇಕು.
ಹಣವನ್ನು (ಪೇಔಟ್) ನೀಡುವುದಕ್ಕಿಂತ ಮೊದಲೇ ಯಾವ ಯಾವ ಪ್ರದೇಶಗಳಲ್ಲಿ ವಿಮೆ ಹಣ ಪಡೆಯಲು ಅರ್ಹವಾಗಿರುವ ಮತ್ತು ಬೆಳೆಗಾರರ ಪಟ್ಟಿಯನ್ನು ಪ್ರಕಟಿಸಬೇಕು.
ಕಳೆದ 10 ವರ್ಷಗಳಿಂದಲೂ ಕಾಳುಮೆಣಸಿನ ವಿಮಾ ಮೊತ್ತವು ಹೆಕ್ಟೇರ್ ಗೆ ಕೇವಲ 47 ಸಾವಿರ ರೂಗಳ್ನು ಮಾತ್ರ ನಿಗದಿಪಡಿಸಿರುತ್ತಾರೆ. ಇತ್ತೀಚಿನ ಬ್ಯಾಂಕುಗಳ ಹಣಕಾಸಿನ ಪ್ರಮಾಣ ಆಧರಿಸಿ ಕನಿಷ್ಠ ಹೆಕ್ಟೇರ್ ಗೆ 80 ಸಾವಿರ ರೂಗಳನ್ನು ನಿಗದಿಪಡಿಸಲು ಶಿಪಾರಸ್ಸು ಮಾಡಬೇಕು ಎಂದು ಬೆಳೆಗಾರರ ಸಂಘವು ಒತ್ತಾಯಿಸಿದೆ ಎಂದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೂ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಅಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಮುಂದಿನ ದಿನಗಳಲ್ಲಿಯಾದರೂ ರೈತರಿಗೆ ಅನ್ಯಾಯವಾಗದಂತೆ ಇಲಾಖೆಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಉಪಸ್ಥಿತರಿದ್ದರು.



