ಇತ್ತೀಚಿನ ದಿನಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿರುವ ಸಂದರ್ಭದಲ್ಲಿ, ಮೂಡಿಗೆರೆ ತಾಲ್ಲೂಕು ಬಗ್ಗಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ವಿದ್ಯಾರ್ಥಿ ಬಲದೊಂದಿಗೆ ನಿರಂತರ ಅಭಿವೃದ್ಧಿಯತ್ತ ಸಾಗುತ್ತಿರುವುದು ಗಮನಾರ್ಹವಾಗಿದೆ.
ಶಾಲೆಯಲ್ಲಿ LED ಪರದೆ ಅಳವಡಿಸಿ ವಿಜೃಂಭಣೆಯೊಂದಿಗೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪಿ. ವಾಸುದೇವ್, ಶಿಕ್ಷಣ ಕ್ಷೇತ್ರದ ಗಣ್ಯರು, ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದರು.
ವಿದ್ಯಾರ್ಥಿಗಳು ನೃತ್ಯ, ನಾಟಕ, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ನೃತ್ಯಗುರು ಶ್ರೀ ಕಿಶೋರ್ ಅವರ ಮಾರ್ಗದರ್ಶನದಲ್ಲಿ ನಡೆದ ನೃತ್ಯ ಪ್ರದರ್ಶನಗಳು ವಿಶೇಷ ಗಮನ ಸೆಳೆದವು. LED ಪರದೆ ಮೂಲಕ ಶಾಲೆಯ ಶೈಕ್ಷಣಿಕ ಸಾಧನೆಗಳು, ವಿದ್ಯಾರ್ಥಿಗಳ ಚಟುವಟಿಕೆಗಳು ಹಾಗೂ ಶಾಲೆಯ ಅಭಿವೃದ್ಧಿ ಕಾರ್ಯಗಳ ಕುರಿತ ವೀಡಿಯೊಗಳನ್ನು ಪ್ರದರ್ಶಿಸಲಾಯಿತು.
ಈ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕುಟುಂಬಗಳಿಂದ ಬಂದವರಾಗಿದ್ದರೂ, ಖಾಸಗಿ ಶಾಲೆಗಳಿಗೆ ಸಮಾನವಾದ ಗುಣಮಟ್ಟದ ಶಾಲಾ ಅನುಭವವನ್ನು ತಮ್ಮ ಮಕ್ಕಳಿಗೆ ನೀಡಬೇಕೆಂಬ ಪೋಷಕರ ಆಶಯ ಶ್ಲಾಘನೀಯವಾಗಿದೆ. ಶಿಕ್ಷಕರು, SDMC ಸದಸ್ಯರು ಹಾಗೂ ಪೋಷಕರ ಸಂಯುಕ್ತ ಪ್ರಯತ್ನದಿಂದ ವಾರ್ಷಿಕೋತ್ಸವವನ್ನು ಖಾಸಗಿ ಶಾಲೆಗಳ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಯೋಜಿಸಲಾಗಿದೆ.

ಮುಖ್ಯ ಅತಿಥಿ ಶ್ರೀ ಪಿ. ವಾಸುದೇವ್ ಮಾತನಾಡಿ, ಸರ್ಕಾರಿ ಶಾಲೆಗಳು ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಶಾಲೆ ಉತ್ತಮ ವಿದ್ಯಾರ್ಥಿ ಸಂಖ್ಯೆಯೊಂದಿಗೆ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಯೋಜನೆ ಇರುವುದನ್ನು ತಿಳಿಸಿದರು. ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ SDMC ಅಧ್ಯಕ್ಷ ಜಬೀರ್ ಹುಸೇನ್, ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದರು. ಮಕ್ಕಳನ್ನು ಸಣ್ಣ ಕೆಲಸಗಳಿಗೆ ಹಣ ನೀಡಿ ಪ್ರೇರೇಪಿಸುವುದು ಅಜ್ಞಾತವಾಗಿ ಲಂಚದ ಮನೋಭಾವನೆಗೆ ಕಾರಣವಾಗುತ್ತದೆ ಎಂದು ಹೇಳಿ, ಪೋಷಕರು ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಎ.ಸಿ. ಆಯುಬ್, ಬಿ.ಎ. ಉಮ್ಮರ್, ಜಿ.ಎಚ್. ಶ್ರೀನಿವಾಸ್, ಕವೀಶ್, ಮನು, ಪ್ರಸಾದ್ ಶೆಟ್ಟಿ, ಪಿಡಿಒ ಶ್ರೀಮತಿ ಚಂದ್ರಾವತಿ, ರವಿ ಗೌಡ, ಮಂಜಪ್ಪ, ಕೆ. ಪುಟ್ಟರಾಜು ಉಪಸ್ಥಿತರಿದ್ದರು. ಜೊತೆಗೆ ಹಳೆಯ ವಿದ್ಯಾರ್ಥಿಗಳಾದ ನಹೀಮ್, ರಾಜೇಶ್, ಸತೀಶ್ ಹಾಗೂ ಅಫೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಶಾಲೆಯ ಮೇಲಿನ ಆತ್ಮೀಯತೆಯನ್ನು ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮಾ ಬಿ.ಟಿ., ಶಿಕ್ಷಕಿಯರಾದ ಗಾಯತ್ರಿ, ಲತಾ, ನಯೀಮಾ ಅಖ್ತರ್ ಅವರ ಶ್ರಮ ಹಾಗೂ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. SDMC ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲಾ ವಾರ್ಷಿಕೋತ್ಸವವು ಅತ್ಯಂತ ಯಶಸ್ವಿಯಾಗಿ ಮತ್ತು ಸ್ಮರಣೀಯವಾಗಿ ನೆರವೇರಿತು. ಕೊನೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.



