ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಹೆಚ್ಚು ಪಾರದರ್ಶಕವಾಗಿಸಬೇಕು ಮತ್ತು ಸ್ಯಾಟಲೈಟ್ ಮೂಲಕ ಮಳೆಪ್ರಮಾಣ ಅಳತೆ ಮಾಡಿ, ಪ್ರತಿ ಗ್ರಾಮದಲ್ಲಿನ ಮಳೆಯ ಪ್ರಮಾಣಕ್ಕನುಗುಣವಾಗಿ ವಿಮಾಮೊತ್ತವನ್ನು ರೈತರಿಗೆ ನೀಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವರುಂದ ಸಲಹೆ ನೀಡಿದರು.
ಅವರು ಶುಕ್ರವಾರ ಮೂಡಗೆರೆ ತಾಲ್ಲೂಕು ಕಛೇರಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸಂಬಂಧಿಸಿದಂತೆ ರೈತರೊಂದಿಗೆ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹವಾಮಾನ ಆಧಾರಿತ ಬೆಳೆವಿಮೆಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಕಳೆದ ಸಾಲಿನಲ್ಲಿ ಮಲೆನಾಡಿನಾದ್ಯಂತ ವ್ಯಾಪಕ ಮಳೆಯಾಗಿದ್ದು, ಅಪಾರ ಬೆಳೆನಷ್ಟವಾಗಿದೆ. ಆದರೆ ಮಳೆಮಾಪನವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ರೈತರಿಗೆ ವಿಮಾಮೊತ್ತ ಸಿಗದಂತಾಗಿದೆ. ಹಾಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಯಾಟಲೈಟ್ ಮೂಲಕ ಮಳೆಮಾಪನ ಮಾಡಿದರೆ ನಿಖರ ಮಾಹಿತಿ ಲಭ್ಯವಾಗುತ್ತದೆ. ವಿಮಾ ಯೋಜನೆಯ ಪ್ರತಿಹಂತದ ಮಾಹಿತಿ ರೈತರಿಗೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು ವಿಮಾ ಯೋಜನೆಗೆ ಸಂಬಂಧಿಸಿದಂತೆ ಬೆಳೆಗಾರರ ಸಂಘದ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹವಾಮಾನಾಧಾರಿತ ಬೆಳೆ ವಿಮೆ (WBCI) ಯೋಜನೆಗೆ ಸಂಬಂಧಿಸಿದಂತೆ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘವು ಈ ಕೆಳಕಂಡ ಆಹವಾಲುಗಳನ್ನು ಮುಂದಿಡುತ್ತಿದ್ದು ಪರಿಗಣಿಸಬೇಕೆಂದು
ಅವರು ತಮ್ಮ ಮನವಿಯಲ್ಲಿ : ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆನಷ್ಟದ ಅಂದಾಜು ಪ್ರಕ್ರಿಯೆ ಹಾಗೂ ನಷ್ಟಕ್ಕೆ ನೀಡಲಾಗುವ ವಿಮೆ, ಯಾವ ಮಾನದಂಡವನ್ನಾಧರಿಸಿ ಲೆಕ್ಕಾಚಾರ ಮಾಡುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದ್ದು, ನಷ್ಟದ ಪ್ರಮಾಣವನ್ನು ಅಂದಾಜುಮಾಡುವ ಮಾನದಂಡಗಳು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು ಇದನ್ನು ಗ್ರಾಮ ಮಟ್ಟಕ್ಕೆ ವಿಕೇಂದ್ರೀಕರಣಗೊಳಿಸಿ, ಗ್ರಾಮ ಮಟ್ಟದಲ್ಲಿ ನಷ್ಟದ ಪ್ರಮಾಣ ಅಂದಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಹಾಗೂ ಗ್ರಾಮ ಮಟ್ಟದಲ್ಲಿ ಉಂಟಾಗುವ ನಷ್ಟಕ್ಕೆ ಅನುಗುಣವಾಗಿ ಪರಿಗಣಿಸಿ ವಿಮೆ ನೀಡಬೇಕು.
ಪಂಚಾಯಿತಿ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಹವಾಮಾನ ಮಾಹಿತಿ ಸಂಗ್ರಹಣಾ ಘಟಕವನ್ನು ಸ್ಥಾಪಿಸುವುದಕ್ಕೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಕಂಡುಬಂದಲ್ಲಿ ಬೆಳೆಗಾರರ ಸಂಘಟನೆಯ ವತಿಯಿಂದ ಸ್ಥಳೀಯ ಉತ್ಸಾಹಿ ಬೆಳೆಗಾರರ ತೋಟಗಳಲ್ಲಿ ಕ್ರಮಬದ್ಧ/ನಿಯಮಬದ್ಧವಾಗಿ ಘಟಕಗಳನ್ನು ಸ್ಥಾಪಿಸಲು ಬೆಳೆಗಾರರ ಸಂಘದ ಸಹಕಾರವಿದೆ.
ತೀವ್ರ ಗಾಳಿಯಿಂದ ಉಂಟಾಗುವ ಅನಾಹುತ ಹಾಗೂ ನಷ್ಟಗಳನ್ನು ಕೂಡ ವಿಮಾ ಯೋಜನೆಯಲ್ಲಿ ಪರಿಗಣಿಸಬೇಕು.
ವಿಮೆಯ ಪ್ರೀಮಿಯಂ ಮತ್ತು ಪೇಔಟ್ ಅವಧಿಯನ್ನು ಸಂಕ್ಷಿಪ್ತವಾಗಿ ಬೆಳೆಗಾರರಿಗೆ ತಿಳಿಸಿರಬೇಕು ಮತ್ತು ನಿಗದಿತ ಅವಧಿಯಲ್ಲಿಯೇ ವಿಮೆಯನ್ನು ದೊರಕಿಸಿಕೊಡುವ ವ್ಯವಸ್ಥೆ ನಿಯಮಾನುಸಾರವಾಗಿ ಆಗಬೇಕು. ಕಾರಣ ವಿಮೆಯ ನಿಗದಿತ ಅವಧಿ ಪೂರ್ಣಗೊಂಡಿದ್ದರೂ ಕೂಡ ವಿಮೆ ಹಣ ನೀಡುವಲ್ಲಿ ಮೂರ್ನಾಲ್ಕು ತಿಂಗಳಿಗಿಂತಲು ಹೆಚ್ಚು ವಿಳಂಬವಾಗುತ್ತಿದೆ.
ಬ್ಯಾಂಕ್‌ಗಳು ಕೇವಲ ವಿಮೆಯ ಪ್ರೀಮಿಯಂ ಸಂಗ್ರಹ ಮಾಡಿಕೊಳ್ಳುತ್ತಿವೆಯೇ ಹೊರತು ವಿಮೆ ಸಂಬಂಧ ಮಾಹಿತಿ ದೊರಕಿಸಿಕೊಡುತ್ತಿಲ್ಲ. ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ವಿಮಾ ಸಂಸ್ಥೆಯ ನೋಡೆಲ್ ಅಧಿಕಾರಿಯನ್ನು ನೇಮಿಸಿ ಪ್ರಾದೇಶಿಕ ಕಚೇರಿಗಳನ್ನು ತೆರೆದು ಮಾಹಿತಿ ನೀಡುವ ಕೆಲಸ ಆಗಬೇಕು.
ವಿಮೆಯ ಪ್ರೀಮಿಯಂ ಪಾವತಿಸಿಕೊಂಡ ಬಳಿಕ ಪ್ರತೀ ತಿಂಗಳ ಕೊನೆಯಲ್ಲಿ ಅಥವಾ ನಂತರ ಪ್ರಾರಂಭವಾಗುವ ತಿಂಗಳ ಮೊದಲ ವಾರದಲ್ಲಿ ವಿಮೆಗೆ ಪೂರಕವಾದ ಹವಾಮಾನ ಇತ್ತೋ/ಇಲ್ಲವೋ ಎಂಬುದರ ಬಗ್ಗೆ ಪ್ರತೀ ತಿಂಗಳು ರೈತ ಬೆಳೆಗಾರರಿಗೆ ಸಾಮಾಜಿಕ ತಾಣಗಳ ಮೂಲಕ (ವಾಟ್ಸಪ್) ಗ್ರಾಮಗಳ ಹೆಸರುಗಳನ್ನೊಳಗೊಂಡಂತೆ ಮಾಹಿತಿ ನೀಡಬೇಕು.
ಹಣವನ್ನು (ಪೇಔಟ್) ನೀಡುವುದಕ್ಕಿಂತ ಮೊದಲೇ ಯಾವ ಯಾವ ಪ್ರದೇಶಗಳಲ್ಲಿ ವಿಮೆ ಹಣ ಪಡೆಯಲು ಅರ್ಹವಾಗಿರುವ ಮತ್ತು ಬೆಳೆಗಾರರ ಪಟ್ಟಿಯನ್ನು ಪ್ರಕಟಿಸಬೇಕು.
ಕಳೆದ 10 ವರ್ಷಗಳಿಂದಲೂ ಕಾಳುಮೆಣಸಿನ ವಿಮಾ ಮೊತ್ತವು ಹೆಕ್ಟೇರ್ ಗೆ ಕೇವಲ 47 ಸಾವಿರ ರೂಗಳ್ನು ಮಾತ್ರ ನಿಗದಿಪಡಿಸಿರುತ್ತಾರೆ. ಇತ್ತೀಚಿನ ಬ್ಯಾಂಕುಗಳ ಹಣಕಾಸಿನ ಪ್ರಮಾಣ ಆಧರಿಸಿ ಕನಿಷ್ಠ ಹೆಕ್ಟೇರ್ ಗೆ 80 ಸಾವಿರ ರೂಗಳನ್ನು ನಿಗದಿಪಡಿಸಲು ಶಿಪಾರಸ್ಸು ಮಾಡಬೇಕು ಎಂದು ಬೆಳೆಗಾರರ ಸಂಘವು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಕೆಜಿಎಫ್ ಮಾಜಿ ಅಧ್ಯಕ್ಷ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಂ, ಸಿಪಿಐ ಮುಖಂಡ ಬಿ.ಕೆ. ಲಕ್ಷ್ಮಣಕುಮಾರ್, ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಗೌಡ, ಕಾರ್ಯದರ್ಶಿ ಚಂದ್ರಶೇಖರ್, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಯತೀಶ್ ಬೆಟ್ಟಗೆರೆ, ಮಾಕೋನಹಳ್ಳಿ ಸಹಕಾರ ಸಂಘದ ಸಂಘದ ಎಂ.ಎನ್. ಅಶ್ವತ್, ರೈತ ಸಂಘದ ಮುಖಂಡ ಬಿ.ಸಿ.ದಯಾಕರ್, ರೈತ ಉತ್ಪಾದಕ ಸಂಘದ ಅಧ್ಯಕ್ಷ ಪೂರ್ಣೇಶ್ ಜಿ.ಹೊಸಳ್ಳಿ, ಮೆಸ್ಕಾಂ ಗ್ರಾಹಕರ ಹಿತರಕ್ಷಣಾ ವೇದಿಕೆಯ ಎಂ.ಜೆ.ಭರತ್, ವಿವಿಧ ಸಂಘಸಂಸ್ಥೆಗಳ ಮುಖಂಡರು, ವಿವಿಧ ಗ್ರಾಮ ಪಂಚಾಯಿತಿಗಳ, ಸಹಕಾರ ಸಂಘಗಳ ಅಧ್ಯಕ್ಷರು, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.
ಮೂಡಿಗೆರೆ ತಹಸೀಲ್ದಾರ್ ಅಶ್ವಿನಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಶ್ವೇತಾ ಅವರು ಸಭೆಗೆ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು .



