ನಾಡಪ್ರಭು ಕೆಂಪೇಗೌಡರು ಆಚಾರಕ್ಕೆ ಅರಸು, ನೀತಿಗೆ ಪ್ರಭು, ಮಾತಿನಲ್ಲಿ ಚೂಡಮಣಿ. ಅವರ ಕಾಲಘಟ್ಟದಲ್ಲಿ ಆರವತ್ತಕ್ಕೂ ಹೆಚ್ಚು ಪೇಟೆಗಳನ್ನು ಅಭಿವೃದ್ದಿಪಡಿಸಿ ಬೆಂಗಳೂರು ಅಭಿವೃದ್ಧಿಗೆ ಮುನ್ನುಡಿ ಬರೆದವರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪಟ್ಟಣದ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಆಲ್ದೂರು ಒಕ್ಕಲಿಗರ ಸಂಘದಿಂದ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ನೂತನ ಕಂಚಿನ ಪುತ್ಥಳಿಯನ್ನು ಸೋಮವಾರ ಅನಾವರಣಗೊಳಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

ಸಮಾಜದಲ್ಲಿ ಮಕ್ಕಳಿಗೆ ಪಾಲಕರು ನಿತ್ಯ ಬೋಧನೆ, ರಾಷ್ಟ್ರಾಭಿಮಾನ ಮೂಡಿಸುವ ತತ್ವಗುಣಗಳನ್ನು ಕಲಿಸಿದರೆ ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಅದರಂತೆ ಕೆಂಪೇಗೌಡರ ಪಾಲಕರು ಬಾಲ್ಯದಿಂದಲೇ ಸನ್ನಡತೆ, ಸದ್ವಿಚಾರ ಬೋಧಿಸಿದ ಕಾರಣದಿಂದಲೇ 15ನೇ ಶತಮಾನದ ಕೆಂಪೇಗೌಡರ ಕಾರ್ಯವನ್ನು ಇಂದಿಗೂ ನೆನಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಕೆಂಪೇಗೌಡರು ಕೇವಲ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿಲ್ಲ. ಇಡೀ ನಾಡಿನ ಕೀರ್ತಿ ಹೆಚ್ಚಿಸಿದ ಮಹಾಪುರುಷ. ಆ ಶ್ರೇಷ್ಟ ವ್ಯಕ್ತಿಯ ಜೀವನಚರಿತ್ರೆ ಅಭ್ಯಾಸ, ಆದರ್ಶ ಹಾಗೂ ಸತ್ಯದ ಹಾದಿಯಲ್ಲಿ ಸಾಗುವ ಅಂಶವನ್ನು ಇಂದಿನ ನವ ಯುವಕರು ಮೈಗೂಡಿಕೊಳ್ಳಬೇಕು. ಕೆಂಪೇಗೌಡರ ಪ್ರತಿಮೆ ಹಿಂದಿನ ಇತಿಹಾಸ ಮರುಸೃಷ್ಟಿಸುವ ಚರಿತ್ರೆಯಾಗಬೇಕು ಎಂದು ಹೇಳಿದರು.
15ನೇ ಶತಮಾನದಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೀಮಿತ ಗೊಳಿಸದೇ, ಸರ್ವ ಧರ್ಮಿಯರನ್ನು ಒಟ್ಟುಗೂಡಿಸಿ 64 ಪೇಟೆಗಳನ್ನು ಅಭಿವೃಧ್ದಿಪಡಿಸಿದವರು. ಅಂದಿನ ಕಾಲ ದಲ್ಲೇ ಹೊಸ ಹೊಸ ಕೌಶಲ್ಯಯುತ ಕಲೆಯನ್ನು ಉಪಯೋಗಿಸುವ ಕಲಾತ್ಮಕ ಚಟುವಟಿಕೆಯನ್ನು ಸಮಾಜಕ್ಕೆ ತಿಳಿಸಿಕೊಟ್ಟ ಶ್ರೇಷ್ಟ ವ್ಯಕ್ತಿ ಅವರು ಎಂದರು.
ಆಧುನಿಕ ಜಗತ್ತಿನಲ್ಲಿ ಯುವಜನತೆ ಸಿನಿಮಾ ನಟರು, ರೀಲ್ಸ್‍ಗಳ ವ್ಯಕ್ತಿಗಳನ್ನೇ ಮಾದರಿ ವ್ಯಕ್ತಿಗಳಾಗಿ ಮಾಡಿಕೊಂಡಿದ್ದಾರೆ. ಈ ಹೊರತಾಗಿ ದೇಶ ಹಾಗೂ ನಾಡಿಗಾಗಿ ದುಡಿದ ಕೆಂಪೇಗೌಡ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರಂಥ ಮಹಾಪುರುಷರನ್ನು ಮಾದರಿ ವ್ಯಕ್ತಿಗಳಾಗಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ; ನಾಡಿಗಾಗಿ ಶ್ರಮಿಸಿದ ಕೆಂಪೇಗೌಡ ಸಾಧನೆ ಜಿಲ್ಲೆಯಲ್ಲಿ ವ್ಯಾಪಿಸಲು ಪ್ರತಿಮೆ ನಿರ್ಮಾಣ ಅವಶ್ಯಕ. ಪ್ರತಿಮೆ ಎಂಬುದು ಸುಲಭದ ಮಾತಲ್ಲ. ಕಲ್ಲು ಅಥವಾ ಲೋಹದಲ್ಲಿ ಮೂಲ ಚಿತ್ರಣಕ್ಕೆ ಒದಗಿಸಲು ನೈಪುಣ್ಯತೆ ಅಗತ್ಯವಿದೆ. ಆ ನಿಟ್ಟಿನಲ್ಲಿ ಶಿಲ್ಪಿಯು ಬಹಳ ಸುಂದರ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ ಎಂದರು.

ಐನ್ನೂರು ವರ್ಷಗಳ ಹಿಂದೆಯೇ ನಾಡಿನ ಭದ್ರ ಭವಿಷ್ಯಕ್ಕಾಗಿ ಚಿಂತಿಸಿ ನಗರ, ಪಟ್ಟಣಗಳ ಅಭಿವೃದ್ಧಿಗೆ ಒತ್ತು ನೀಡಿದ ವ್ಯಕ್ತಿ ಕೆಂಪೇಗೌಡ. ಪ್ರಸ್ತುತ ದೇಶದಲ್ಲಿ ಇಂಜಿನಿಯರ್‍ಗಳ ದಂಡೇ ಹೆಚ್ಚಿದ್ದರೂ, ರಾಜ್ಯ ರಾಜ ಧಾನಿಯಲ್ಲಿ ಮಳೆ ಸಂಭವಿಸಿದರೆ ಸಂಪೂರ್ಣ ಮುಚ್ಚುವ ಜೊತೆಗೆ ರಸ್ತೆಗಳು ಗುಂಡಿಗೊಟರಾಗಿವೆ. ಆದರೆ ಕೆಂಪೇಗೌಡರು ಅನಾಧಿ ಕಾಲದಲ್ಲೇ ನಗರಾಭಿವೃದ್ದಿಯಲ್ಲಿ ದೊಡ್ಡಕ್ರಾಂತಿ ಮಾಡಿದ್ದರು ಎಂದು ಹೇಳಿದರು.
ಕೆಂಪೇಗೌಡರು ರಾಜಧಾನಿ ಬೆಂಗಳೂರಿಗೆ ಮಾತ್ರವಲ್ಲದೇ ಹಳೇ ಮೈಸೂರು ಅಭಿವೃಧ್ದಿ ಒತ್ತನ್ನು ನೀಡಿ ದ್ದಾರೆ. ಜಲ ಸಂಪನ್ಮೂಲ, ರೈತರ ಮಾರುಕಟ್ಟೆ ನಿರ್ಮಾಣ ಸೇರಿದಂತೆ ಜನೋಪಯೋಗಿ ಕೆಲಸಗಳಿಗೆ ವಿಶೇಷವಾಗಿ ಸ್ಪಂದಿಸಿದ್ದರು. ಇತಿಹಾಸ ಅರಿಯದವ, ಇತಿಹಾಸ ರಚನೆಗೆ ಯೋಗ್ಯನಲ್ಲ. ಹೀಗಾಗಿ ಕೆಂಪೇಗೌಡರ ಚರಿತ್ರೆ ನಮ್ಮೆಲ್ಲರಿಗೂ ಮಾದರಿ ಎಂದರು.
ಇಂದಿನ ಯುವಜನತೆ ಕೆಂಪೇಗೌಡರ ರೀತಿಯಲ್ಲಿ ನಗರ, ನಾಡು ಕಟ್ಟುವ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಮಠದಿಂದ ಯುವಕರಿಗೆ ಕೆಂಪೇಗೌಡರ ಹಾದಿಯನ್ನು ಪರಿಚಯ, ನಗರ ನಿರ್ಮಾಣ ಹಿನ್ನೆಲೆಯಲ್ಲಿ ತರಬೇತಿ ಒದಗಿಸಲು ಮಠದಿಂದ ಕಾಲೇಜು ನಿರ್ಮಿಸಿದರೆ ನಾಡಿನ ಸಾಕಷ್ಟು ಯುವಕರಿಗೆ ವೈಯಕ್ತಿಕವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಾಸಕಿ ನಯನ ಮೋಟಮ್ಮ ಮಾತನಾಡಿ ಆಲ್ದೂರಿನ ಬಹುದಿನದ ಕನಸು ಕೆಂಪೇಗೌಡರ ಪ್ರತಿಮೆ ನಿರ್ಮಿಸುವ ಮೂಲಕ ಈಡೇರಿಸಿದೆ. ಇದೇ ಗ್ರಾಮದಲ್ಲಿ ಹಿಂದೆ ಡಾ|| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೂ ಅವಕಾಶ ಲಭಿಸಿತ್ತು. ಒಟ್ಟಾರೆ. ಎರಡು ಮಹಾನೀಯರ ಪ್ರತಿಮೆಯು ತಮ್ಮ ಅವಧಿಯಲ್ಲಿ ಪೂರ್ಣಗೊಂಡಿರುವುದು ಬಹಳಷ್ಟು ಖುಷಿ ತಂದಿದೆ ಎಂದರು.
ಆಲ್ದೂರು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಬಿ.ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಂಪೇಗೌಡರ ಪ್ರತಿಮೆಯು ಒಟ್ಟು 2400 ಕೆಜಿ ತೂಕ, 12 ಅಡಿ ಎತ್ತರ, 6 ಅಡಿ ಅಗಲ, 16 ಅಡಿ ಉದ್ದವಿದ್ದು ಅಂದಾಜು ಮೊತ್ತ ರೂ. 24 ಲಕ್ಷ ವೆಚ್ಚವಾಗಿದ್ದು ಗ್ರಾಮದ ಹೃದಯ ಭಾಗದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋ ಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಐ.ಎ.ಪೂರ್ಣೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಗೌರವಾಧ್ಯಕ್ಷ ಹೆಚ್.ಎಸ್.ಕವೀಶ್, ಉಪಾಧ್ಯಕ್ಷ ಸಂಪತ್ ಹೆಡದಾಳು, ಗ್ರಾ.ಪಂ. ಅಧ್ಯಕ್ಷೆ ಜುಬೇಧ ಹಸೈನಾರ್, ಪುತ್ಥಳಿ ಸ ಮಿತಿ ಕಾರ್ಯದರ್ಶಿ ವಸಂತ್‍ಕುಮಾರ್, ಸಹ ಕಾರ್ಯದರ್ಶಿ ರಂಜಿತ್, ಖಜಾಂಚಿ ಲಿಂಗೇಗೌಡ, ಪದಾಧಿ ಕಾರಿಗಳಾದ ಹೆಚ್.ಆರ್.ಸಂದೇಶ್ ಸೇರಿದಂತೆ ಮತ್ತಿತರರಿದ್ದರು.



