ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗ್ಯ ಯುವಕರು ಸಂಕಲ್ಪ ಹೊತ್ತು ರಾಜಕೀಯ ಕ್ಷೇತ್ರದ ಮೂಲಕ ವ್ಯವಸ್ಥೆ ಹಾಗೂ ಸಮಾಜ ಪರಿವರ್ತನೆ ಮಾಡುತ್ತೇವೆಂಬ ಪರಿಕಲ್ಪನೆಯೊಂದಿಗೆ ಕನಿಷ್ಠ 1 ಲಕ್ಷ ಜನರು ಬಿಜೆಪಿ ಸೇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಸಿ.ಟಿ ರವಿ ಹೇಳಿದರು.
ಅವರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ನೂತನ ಬಿಜೆಪಿ ಕಛೇರಿಯನ್ನು ಉದ್ಘಾಟಿಸಿ ನಂತರ ಡಾ. ಜೆ.ಪಿ. ಕೃಷ್ಣೇಗೌಡ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪಕ್ಷಕ್ಕೆ ಯುವಕರ ಸೇರ್ಪಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪಕ್ಷ ಸೇರಿದ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ಜನಪರ ಹೋರಾಟ ಜನಪರ ಕಾರ್ಯಗಳ ಮೂಲಕ ಬಿಜೆಪಿಯಲ್ಲಿ ಯುವಕರು ಜನನಾಯಕರಾಗಿ ಬೆಳೆಯಿರಿ, ಮೊದಲು ರಾಷ್ಟ್ರ ನಂತರ ಪಕ್ಷ ಕೊನೆಯಲ್ಲಿ ವ್ಯಕ್ತಿ ಎಂಬ ಸಿದ್ಧಾಂತದೊಂದಿಗೆ ಯುವಕರು ಪಕ್ಷವನ್ನು ಸೇರ್ಪಡೆಯಾಗಿ ಎಂದು ಶುಭ ಹಾರೈಸಿದರು.
ರಾಷ್ಟ್ರದಲ್ಲಿ ಬದಲಾವಣೆ ತರಬೇಕು ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಅದರಂತೆ ಯುವಕರು ಪಕ್ಷ ಸೇರುತ್ತಿರುವುದು 1988 ರಲ್ಲಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದ ನೆನಪಾಯಿತು ಎಂದು ಹೇಳಿದರು.
ಹಿಂದುತ್ವಕ್ಕಾಗಿ ರಾಜಕಾರಣ ಮಾಡಬೇಕೆಂಬ ಉದ್ದೇಶದೊಂದಿಗೆ ಇದ್ದಾಗ ಅವಮಾನ, ಅನುಮಾನ ವ್ಯಕ್ತಪಡಿಸಿದ್ದರು. ಈಗ ಇದಾವುದೂ ಇಲ್ಲದೆ ಪ್ರಪಂಚದಲ್ಲಿ ಮೊದಲ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಅತೀ ಹೆಚ್ಚು ಸದಸ್ಯತ್ವ ಪಡೆದಿರುವ ಏಕೈಕ ಪಕ್ಷ ಬಿಜೆಪಿ, ಭಾರತದಲ್ಲಿ ಅತೀ ಹೆಚ್ಚು ಸಂಸದರು, ಶಾಸಕರು, ಎಸ್‍ಸಿ, ಎಸ್‍ಟಿ ಶಾಸಕರನ್ನು ಹೊಂದಿದ್ದು, ಜಗತ್ತಿನಲ್ಲಿಯೇ ಜನಪ್ರಿಯವಾಗಿರುವ ನರೇಂದ್ರ ಮೋದಿಯವರು ಹೆಮ್ಮೆಯ ನಾಯಕರಾಗಿದ್ದಾರೆಂದು ಬಣ್ಣಿಸಿದರು.
ನನ್ನ ಭಾರತ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ, ಸಮೃದ್ಧ, ಶಕ್ತಿಶಾಲಿಯಾಗಬೇಕೆನ್ನುವುದು ಪ್ರಧಾನಿಯವರ ಕನಸಾಗಿದ್ದು, ಆ ಮೂಲಕ ಭಾರತ ವಿಶ್ವಗುರುವಾಗಬೇಕೆನ್ನುವುದು ಅದಕ್ಕೆ ಪೂರಕವಾಗಿ ರಾಜಕೀಯವನ್ನು ಒಂದು ಸಾಧನವಾಗಿ ಬಳಸಿ ವ್ಯವಸ್ಥೆ ಪರಿವರ್ತನೆಗೆ ಶ್ರಮಿಸುತ್ತಿದ್ದಾರೆಂದು ಶ್ಲಾಘಿಸಿದರು.
ಡಾ.ಜೆ.ಪಿ. ಕೃಷ್ಣೇಗೌಡರ ಪುತ್ರಿ ಡಾ. ವರ್ಷ ರವರು ಉನ್ನತ ವ್ಯಾಸಂಗ ಮಾಡಿ ರಾಜಕೀಯವಾಗಿ ಸೇವೆ ಮಾಡಲು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ, ಅವರ ಪಕ್ಷ ನಿಷ್ಠೆ ಮತ್ತು ಕೆಲಸವನ್ನು ನೋಡಿ ಪಕ್ಷವೇ ಅವರನ್ನು ಗುರುತಿಸಿ ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದರು.

ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಸರ್ವರಿಗಾಗಿ ಬಿಜೆಪಿಯಾಗಿದ್ದು, ಇಲ್ಲಿ ಜಾತಿ ಮತ ಬೇಧ ಇಲ್ಲ. ಈ ಪಕ್ಷ ಎಲ್ಲರಿಗಾಗಿ ಎಂಬ ತತ್ವದೊಂದಿಗೆ ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಬಲವಂತವಿಲ್ಲದೆ ಬಿಜೆಪಿ ಸೇರುತ್ತಿರುವ ಯುವಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಮುಖಂಡರ ನೇತೃತ್ವದಲ್ಲಿ ಅತೀ ಹೆಚ್ಚು ಯುವಕರು ಬಿಜೆಪಿ ಪಕ್ಷವನ್ನು ಸೇರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಇವರೇ ಜೀವಾಳವಾಗಿ ಕಾರ್ಯಕರ್ತರು ಪಕ್ಷದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ದೊಡ್ಡ ಹುದ್ದೆಗಳನ್ನು ಅಲಂಕರಿಸಲು ಅವಕಾಶ ಇರುವ ಪಕ್ಷ ಬಿಜೆಪಿ ಎಂದರು.
ಡಾ. ವರ್ಷ ಸ್ವಾಗತಿಸಿ ಮಾತನಾಡಿ, ಬಿಜೆಪಿ ಪಕ್ಷದ ಬಲವರ್ಧನೆ ಉದ್ದೇಶದೊಂದಿಗೆ ಯುವಕರು ಮತ್ತು ಮಹಿಳೆಯರು ಪಕ್ಷ ಸೇರುತ್ತಿರುವುದು ಸಂತಸ ತಂದಿದೆ. ಮುಂದೆ ಇವರಿಗೆ ವೇದಿಕೆ ನೀಡಿ ನಂಬಿಕೆ, ಧೈರ್ಯ ತುಂಬುವ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸುವುದಾಗಿ ತಿಳಿಸಿದರು.
ಬಿಜೆಪಿ ಪಕ್ಷ ಕುಟುಂಬವಿದ್ದಂತೆ, ಇದಕ್ಕೆ ಶಕ್ತಿ ತುಂಬುವ ಜವಾಬ್ದಾರಿ ಯುವಜನಾಂಗದ ಮೇಲಿದೆ. ಫೆ.5 ರಂದು ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಅತೀ ಹೆಚ್ಚು ಸದಸ್ಯರು ಸೇರ್ಪಡೆಯಾಗಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಕಾಮತ್, ಮಹೇಶ್, ವೆಂಕಟೇಶ್, ಜ್ಯೋತಿಕೃಷ್ಣ, ಡಾ. ಗೌರಿ ಮತ್ತಿತರರು ಉಪಸ್ಥಿತರಿದ್ದರು.



