ಕಳಸ ತಾಲ್ಲೂಕಿನ ಸಂಸೆಯಿಂದ ಬೆಳ್ತಂಗಡಿ ತಾಲ್ಲೂಕಿನ ಎಳನೀರು ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ಖಂಡಿಸಿರುವ ಕಳಸ ಕಾಂಗ್ರೆಸ್ ಮುಖಂಡರು, “ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಜನರನ್ನು ಪ್ರಚೋದಿಸುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ. ಭಾನುವಾರ ನಡೆದ ಘಟನೆಯ ಕುರಿತು ಸೋಮವಾರ ಕಳಸದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಹಿತ್ತಲಮಕ್ಕಿ ರಾಜೇಂದ್ರ ಮಾತನಾಡಿ, “ಶಾಸಕರ ಅನುದಾನದಡಿ 80 ಲಕ್ಷ ರೂ. ವೆಚ್ಚದಲ್ಲಿ ಸಂಸೆ ಎಳನೀರು ರಸ್ತೆ ಕಾಮಗಾರಿ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಬಿಜೆಪಿ ಅಭ್ಯರ್ಥಿಯು ಸಂಸೆ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಸರಿಯಲ್ಲ. ಅಭಿವೃದ್ಧಿ ಸಹಿಸದ ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ,” ಎಂದು ದೂರಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಸಂಸದರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ಈ ಭಾಗದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಮಾತನಾಡಿ, “ಬಿಜೆಪಿ ನಾಯಕರು ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಖುದ್ದಾಗಿ ಬಂದು ವೀಕ್ಷಿಸಲಿ. ನಮಗೆ ಅದರಲ್ಲಿ ಯಾವುದೇ ಅಭ್ಯಂತರವಿಲ್ಲ. ಕಾಮಗಾರಿ ಬಗ್ಗೆ ತಕರಾರು ಎತ್ತುವ ಬದಲು ಬಿಜೆಪಿಯವರೇ ಮೇಸ್ತ್ರಿ ಕೆಲಸ ಮಾಡಲಿ,” ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತೋಟದೂರು ಗ್ರಾಮದಲ್ಲಿ ಒಂದು ಸೇತುವೆ ಮತ್ತು ಒಂದು ರಸ್ತೆ ಕಾಮಗಾರಿ ಹಾಗೂ ಕಳಸದಲ್ಲಿ ಒಂದು ರಸ್ತೆ ಕಾಮಗಾರಿ ಖಾಸಗಿ ವ್ಯಕ್ತಿಗಳ ಹಾಗೂ ಸಂಘಟನೆಯ ಅನುಕೂಲಕ್ಕಾಗಿ ಮಾಡಲಾಗಿದೆ. ಹಲವಾರು ತಡೆಗೋಡೆಗಳ ರೂಪದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ. ಆದರೆ ಅದನ್ನೆಲ್ಲಾ ಮರೆತು ಈಗ ನಡೆಯುತ್ತಿರುವ ಅಭಿವೃದ್ಧಿ ಕೆಲಸಕ್ಕೆ ಕಳಪೆ ಎಂಬ ಹಣೆಪಟ್ಟಿ ಹಚ್ಚುವ ಹುನ್ನಾರ ಯಾಕೆ ಎಂದೂ ಅವರು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, “ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮಗೆ ಸೋಲಾಗುವ ಭೀತಿಯಿಂದ ಬಿಜೆಪಿ ಈ ಪ್ರತಿಭಟನೆಯ ನಾಟಕವಾಡುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವಿನಾಕಾರಣ ಅಡ್ಡಿಪಡಿಸುವುದು ಅವರ ಚಾಳಿಯಾಗಿದೆ,” ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಸುಜಿತ್, ಶ್ರೀನಿವಾಸ, ವೀರೇಂದ್ರ, ಮಮ್ಮುಂಜಿ, ಉದಯ್, ಅನಿಲ್ ಭಂಡಾರಿ ಸುದ್ದಿಗೋಷ್ಟಿಯಲ್ಲಿದ್ದರು.



