ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದರೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾತ್ರ ನಿಂತ ನೀರಿನಂತಾಗಿದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರ ಪರಾಜಿತ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ದೂರಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ಕ್ಷೇತ್ರದ ಶಾಸಕರು ಜನಸಾಮಾನ್ಯರ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದು, ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಹೊಸ ಯೋಜನೆಗಳಾಗಲಿ, ಅಭಿವೃದ್ಧಿ ಕಾರ್ಯಗಳ ಪ್ರಸ್ತಾವನೆ ಸಹ ಇಲ್ಲದಂತಾಗಿದೆ. ರಸ್ತೆ ಗುಂಡಿ ಮುಚ್ಚುವ ಸಣ್ಣ ಪುಟ್ಟ ಕೆಲಸಗಳು ನಡೆಯತ್ತಿದ್ದರೂ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿವೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಮಲೆಮನೆ, ಮಧುಗುಂಡಿ ಇತರೆ ಗ್ರಾಮಗಳ ಜನರಿಗೆ ಪರಿಹಾರ ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತ್ರಸ್ತರಿಗೆ ಬದಲಿ ಭೂಮಿ ಗುರುತಿಸುವ ಪ್ರಕ್ರಿಯೆ ನಡೆದಿತ್ತು. ಅದನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಕ್ಷೇತ್ರದ ಶಾಸಕರು ಮಾಡಲಿಲ್ಲ ಎಂದು ದೂರಿದರು.
ಆನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ವಿಚಾರವನ್ನು ಗಂಬೀರವಾಗಿ ಪರಿಗಣಿಸಲೆ ಇಲ್ಲ. ಶಾಸಕರು ಈ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಪರಿಹಾರ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಸಚಿವರು ಸಾವು ನೋವು ಸಂಭವಿಸಿದಾಗ ಮಾತ್ರ ತಕ್ಷಣ ಆದೇಶ ಮಾಡುತ್ತಾರೆ. ಆದರೆ ಅದ್ಯಾವುದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಆನೆ ಹಾವಳಿ ತಡೆಗೆ ಬೇಲಿ ನಿರ್ಮಿಸುವುದು, ಆನೆ ಶಿಬಿರ ಸ್ಥಾಪಿಸುವುದು ಸೇರಿದಂತೆ ಹಲವು ಆದೇಶಗಳು ನೆನೆಗುದಿಗೆ ಬಿದ್ದಿವೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಳಸ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಾ ಬಂದರೂ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ತಾಲ್ಲೂಕು ಕಛೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುವುದಾಗಿ ಹೇಳಲಾಗುತ್ತಿದ್ದರೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಕಳಸ ತಾಲ್ಲೂಕಿನ ಜನರು ಮೂಡಿಗೆರೆಗೆ ಅಲೆಯುವುದು ತಪ್ಪಿಲ್ಲ ಎಂದು ತಿಳಿಸಿದರು.
ತೀವ್ರ ಹಾಳಾಗಿದ್ದ ಕ್ಷೇತ್ರದ ರಸ್ತೆಗಳನ್ನು ದುರಸ್ಥಿಪಡಿಸಬೇಕೆಂಬ ಸಾರ್ವಜನಿಕರ ಒತ್ತಡದಿಂದಾಗಿ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕೆಲಸ ನಡೆಯುತ್ತಿದ್ದು, ಅಪಾರ ಪ್ರಮಾಣದ ಅಕ್ರಮಗಳು ನಡೆಯುತ್ತಿದ್ದರೂ ಶಾಸಕರು ಚಕಾರವೆತ್ತದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಈವರೆಗೆ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ ಎರಡು ವರ್ಷಗಳಲ್ಲಾದರೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಮಂಜುನಾಥ್, ಮುಖಂಡರಾದ ನಿಖಿತ್, ದೀಕ್ಷಿತ್ ಉಪಸ್ಥಿತರಿದ್ದರು.



