ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರಕಾರಿ ಶಾಲೆಗಳು ನಿರ್ಮಾಣವಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ 2 ಕೊಠಡಿಯಳ್ಳ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಈ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ಬಹಳಷ್ಟು ಮಂದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇಂದಿಗೂ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಅಲ್ಲದೇ ಈ ಶಾಲೆ ಪಿಎಂಶ್ರೀ ಶಾಲೆಯಾಗಿ ಘೋಷಣೆಯಾಗಿದ್ದು, ಇದರ ಉನ್ನತಿಗೆ ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು, ಶಿಕ್ಷಕರ ಸಹಕಾರ ಅಗತ್ಯವಿದೆ. ತಾನು ಶಾಲೆಗೆ ಭೇಟಿ ನೀಡಿದಾಗ ಮಾತ್ರ ಸಮಸ್ಯೆ ಹೇಳಿಕೊಳ್ಳಬಾರದು. ಸರಕಾರಿ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ತನ್ನ ಬಿಇಒ ಮೂಲಕ ಅಥವಾ ನೇರವಾಗಿ ತನ್ನ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷ ತೇಜಸ್ವಿ, ಕ್ಷೇತ್ರ ಸಮನ್ವಯಾಧಿಕಾರಿ ಕರಿಯಪ್ಪ, ಮುಖ್ಯ ಶಿಕ್ಷಕ ನೇಮ್‍ರಾಜ್, ಕೆಡಿಪಿ ಸದಸ್ಯ ರವಿ ಕುನ್ನಳ್ಳಿ, ಮುಖಂಡರಾದ ಸಿ.ಬಿ.ಶಂಕರ್, ಸುರೇಶ್ ಮತ್ತಿತರರಿದ್ದರು.




