ಮೂಡಿಗೆರೆ ಪ.ಪಂ. ವ್ಯಾಪ್ತಿಯ ಎಲ್ಲಾ ಅಂಗಡಿಗಳಿಗೆ ಪರವಾನಗಿ ನವೀಕರಣ ಹಾಗೂ ಹೊಸ ಪರವಾನಗಿಗೆ ಅಧಿಕ ಧರ ನಿಗದಿಪಡಿಸಿದ ಹಿನ್ನಲೆಯಲ್ಲಿ ಪಟ್ಟಣದ ವರ್ತಕರು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಹಾಹ್ನ 1 ಗಂಟೆ ವರೆಗೆ ಬಹುತೇಕ ಅಂಗಡಿ ಮುಗ್ಗಟ್ಟು ಮುಚ್ಚಿ ಬಂದ್ ಕರೆಗೆ ಬೆಂಬಲಿಸಿದರು.

ಈ ಸಂದರ್ಭದಲ್ಲಿ ಅಂಗಡಿ ಮಾಲೀಕರು ಪ.ಪಂ. ಕಚೇರಿಗೆ ತೆರಳಿ ಪ್ರತಿಭಟನೆ ಮುಂದಾದರು. ಬಳಿಕ ಪ.ಪಂ. ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಎಸ್.ಅಶ್ವಿನಿ ಅವರು ಪ.ಪಂ. ಸಭಾಂಗಣದಲ್ಲಿ ವರ್ತಕರೊಂದಿಗೆ ಸಭೆ ನಡೆಸಿದರು. ಈ ವೇಳೆ ವರ್ತಕರು, ಕಳೆದ ಮಾರ್ಚ್ ತಿಂಗಳಲ್ಲಿ ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ವರ್ತಕರ ಗಮನಕ್ಕೆ ಬಾರದೇ ವಿಶೇಷ ಸಾಮಾನ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಂಗಡಿಗಳ ಪರವಾನಗಿ ಮತ್ತು ನವೀಕರಣಕ್ಕೆ ಹೆಚ್ಚುವರಿ ಹಣ ಪಾವತಿಸುವಂತೆ ನಿರ್ಣಯ ಕೈಗೊಂಡಿದ್ದು, ಇದೀಗ ಕಾರ್ಯ ರೂಪಕ್ಕೆ ತಂದು ವರ್ತಕರಿಂದ ಹೆಚ್ಚುವರಿ ಹಣ ಪಡೆಯಲು ಮುಂದಾಗಿದ್ದಾರೆಂದು ದೂರಿದರು.
ಯಾವ ನಿಯಮದಡಿಯಲ್ಲಿ ಧರ ಅಧಿಕಗೊಳಿಸಲಾಗಿದೆ. ಅಲ್ಲದೇ ಇದರ ಹಿಂದೆ ಯಾವುದಾದರೂ ಜನಪ್ರತಿನಿಧಿಗಳ ಕೈವಾಡವಿದ್ದರೆ ಈಗಲೇ ಬಹಿರಂಗಪಡಿಸಬೇಕು. ಈ ಹಿಂದೆ ಪಡೆಯುತ್ತಿದ್ದ ಪರವಾನಗಿ ಮೊತ್ತವನ್ನೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಅಧಿಕ ಮಾಡಬಾರದೆಂದು ಒತ್ತಾಯಿಸಿದರು. ನಂತರ ಆಡಳಿತಾಧಿಕಾರಿ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ವರ್ತಕರು ದಿಢೀರ್ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ಬಹುತೇಕ ವರ್ತಕರು ಅಂಗಡಿ ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದ್ದರು.

ಈ ವೇಳೆ ಮಾತನಾಡಿದ ಸಂಘದ ವರ್ತಕರ ಸಂಘದ ಅಧ್ಯಕ್ಷ ಹೆಚ್.ಎ. ಆದರ್ಶ್ ಒಂದು ಸಾವಿರ ಇದ್ದ ಶುಲ್ಕವನ್ನು ಹತ್ತು ಸಾವಿರಗಳಿಗೆ ಎರಡು ಸಾವಿರ ಇದ್ದದ್ದು ಇಪ್ಪತ್ತು ಸಾವಿರಗಳಿಗೆ ಎರಿಸಲಾಗಿದ್ದು ಈಗಾಗಲೇ ಪಟ್ಟಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಲಗ್ಗೆ ಮತ್ತು ಮೂಲಭೂತ ಸೌಕರ್ಯದ ಕೊರತೆ ಮುಂತಾದ ಕಾರಣಗಳಿಂದ ವ್ಯಾಪಾರ ಮಾಡುವುದು ಕಷ್ಟವಾಗಿದೆ. ಅನೇಕ ಅಂಗಡಿಗಳು ಬಾಗಿಲು ಹಾಕುತ್ತಿವೆ. ಇಂಥದರಲ್ಲಿ ಅಂಗಡಿ ಪರವಾಗಿ ಶುಲ್ಕವನ್ನು ಹತ್ತು ಪಟ್ಟು ಏರಿಸಿರುವುದು ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮವಾಗಿದೆ.
ಈಗಾಗಲೇ ಗ್ರಾಹಕರ ಕೊರತೆಯಿಂದ ನಲುಗಿರುವ ವ್ಯಾಪಾರ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ ಈ ಕಾರಣದಿಂದ ಶುಲ್ಕವನ್ನು ಕೂಡಲೇ ಮರುಪರಿಶೀಲಿಸಿ ಹಳೆಯ ಶುಲ್ಕವನ್ನೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ. ಪಟ್ಟಣ ಪಂಚಾಯಿತಿ ಮುಂದೆ ಸತ್ಯಾಗ್ರಹ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.
ವರದಿ : ನಯನ ತಳವಾರ



