ಬೆಂಗಳೂರಿನ ಕೆ.ಎಲ್.ಶಿವಣ್ಣ ಮೂವತ್ತೇಳು ವರ್ಷ ಸುದೀರ್ಘ ಪಾದಯಾತ್ರೆ ನಡೆಸಿ ಅನ್ನದಾನ ನೀಡಿ ಗಮನ ಸೆಳೆದಿದ್ದಾರೆ.
ಶಿವರಾತ್ರಿಯ ಅಂಗವಾಗಿ ಧರ್ಮಸ್ಥಳಕ್ಕೆ ಲಕ್ಷಾಂತರ ಜನರು ಪಾದಯಾತ್ರೆ ಮಾಡುತ್ತಾರೆ. ಅಂತವರಲ್ಲಿ ಶಿವಣ್ಣ ಕೂಡ ಒಬ್ಬರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿಂದ ಧರ್ಮಸ್ಥಳಕ್ಕೆ 50ರಿಂದ 60 ಜನರ ತಂಡ ಶಿವಣ್ಣ, ಮುರುಗ, ಕೆ.ಎಲ್.ಜಗದೀಶ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿಕೊಂಡು ಬರುತ್ತಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯಲ್ಲಿ 31ಸ್ಥಳಗಳಲ್ಲಿ ಇವರು ಸಾವಿರಾರು ಜನರಿಗೆ ಊಟೋಪಚಾರ, ತಿಂಡಿ ಕಾಫಿ, ಟೀ, ಹೀಗೆ ಅನ್ನದಾನ ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ವಾರ ಅಪಘಾತವಾಗಿ ಕಾಲಿಗೆ ಪೆಟ್ಟಾಗಿದ್ದರೂ ಹರಕೆಯಂತೆ ಇವರು ನಡಿಗೆಯಲ್ಲಿ ಸಾಗುತ್ತಾರೆ.
ಧರ್ಮಸ್ಥಳ ಮಂಜುನಾಥನ ಕೃಪೆ ನಮಗೆ ವರದಾನವಾಗಿದೆ.ಸಾವಿರಾರು ಜನರಿಗೆ ಅನ್ನದಾನ ಮಾಡಿ ಪ್ರತಿವರ್ಷವೂ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಅವರ ತಂಡದಿಂದ ಹರಿಕಥೆ ಮತ್ತಿತರ ಮನೋರಂಜನೆ ನೀಡುತ್ತಾರೆ. ನಡೆದು ನಡೆದು ಬಳಲಿದ ದೇಹಕ್ಕೆ ಸಂಜೆ ಇವರ ತಂಡದಿಂದ ಮನೋಲ್ಲಾಸ ಸಿಗುತ್ತದೆ ಎನ್ನುತ್ತಾರೆ ಪಾದಯಾತ್ರಿ ಕ ಮುರುಗ. ಕೆ.ಎಲ್.ಶಿವಣ್ಣ.
ನಮ್ಮ ಪಾದಯಾತ್ರೆ ತಂಡ ಕೊಟ್ಟಿಗೆಹಾರ ಊರಿನ ಜನರ ಜತೆ ಅವಿನಾಭಾವ ಸಂಬಂಧವಿದ್ದು ಪ್ರತಿ ವರ್ಷವೂ ಇಲ್ಲಿಯ ಗ್ರಾಮಸ್ಥರಿಗೆ ಊಟ ನೀಡುತ್ತಾರೆ. ನಾನಾ ತರದ ಪಲ್ಯ, ಸಿಹಿ, ಅನ್ನ ಹೀಗೆ ಹಲವಾರು ಬಗೆ ಊಟ ಮಾಡಿಸಿ ಪಾದಯಾತ್ರಿಕರ ಸೇರಿದಂತೆ ಊರಿನ ಜನರ ಹಸಿವನ್ನು ನೀಗಿಸಿ ಒಂದು ದಿನ ವಾಸ್ತವ್ಯ ಹೂಡಿ ಮರು ದಿನ ಮುಂಜಾನೆ ದರ್ಮಸ್ಥಳ ಕಡೆಗೆ ಪಾದಯಾತ್ರೆ ಸಾಗುತ್ತದೆ.
ಉಜಿರೆಯಲ್ಲಿ ಒಂದು ದಿನ ತಂಗಿ ಮಾರನೇ ದಿನ ಧರ್ಮಸ್ಥಳ ತಲುಪಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸಂತುಷ್ಟರಾಗಿ ಸಾಗುವುದು ಈ ತಂಡದ ಕಾಯಕವಾಗಿದೆ.
ಪಾದಯಾತ್ರೆಯ ಸಮಯದಲ್ಲಿ 31 ಸ್ಥಳದಲ್ಲಿ ನಿಂತು ಅಲ್ಲಿಯ ಗ್ರಾಮಸ್ಥರ ಪ್ರೀತಿಯನ್ನು ಸಂಪಾದಿಸಿರುವ ಕೆ.ಎಲ್.ಶಿವಣ್ಣ ಅವರಿಗೆ ಜನ ಹರಸಿ ಕಳುಹಿಸುತ್ತಾರೆ ಅಂತ ಜಗದೀಶ್ ಸಂತಸ ವ್ಯಕ್ತ ಪಡಿಸುತ್ತಾರೆ.



