ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸುವುದರಿಂದ ಮಕ್ಕಳಿಗೆ ವ್ಯಾಪಾರ ಜ್ಞಾನ ಮೂಡುವ ಜತೆಗೆ ತಮ್ಮ ಪೋಷಕರು ದುಡಿಮೆಯಲ್ಲಿ ಯಾವ ರೀತಿ ಕಷ್ಟ ಪಡುತ್ತಾರೆಂಬುದರ ಬಗ್ಗೆ ಜೀವನದ ಪಾಠ ಕಲಿಸಿಕೊಟ್ಟಂತಾಗುತ್ತದೆ ಎಂದು ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಪಿಎಂಸಿ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಕ್ಕಳು ವ್ಯಾಪಾರದಲ್ಲಿ ಪಾಲ್ಗೊಳ್ಳುವುದರಿಂದ ಸ್ವಾವಲಂಬನೆಯ ಮಹತ್ವ, ಶ್ರಮದ ಮೌಲ್ಯ, ಹಣಕಾಸಿನ ಜಾಣ್ಮೆ, ಪರಸ್ಪರ ಸಹಕಾರ, ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೇ ಸೃಜನಶೀಲತೆ, ನಾಯಕತ್ವ ಮತ್ತು ಉದ್ಯಮಶೀಲತೆ ಬೆಳೆಸುತ್ತವೆ. ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗಲು, ಸಮಾಜಕ್ಕೆ ಉಪಯುಕ್ತ ನಾಗರಿಕರಾಗಲು ಈ ಅನುಭವಗಳು ಪೂರಕವಾಗುತ್ತದೆ ಎಂದು ಹೇಳಿದರು.

ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಕ್ಕಳು ಜ್ಯೋಸ್, ಮಜ್ಜಿಗೆ, ಕಲ್ಲಂಗಡಿ, ಅನಾನಸ್, ಸೌತೇಕಾಯಿ, ಕೆಸ, ಗೆಣಸು, ಚಕ್ಕುಲಿ, ಕೋಡಬಳೆ ಸೇರಿದಂತೆ ವಿವಿಧ ಬಗೆಯ ತರಕಾರಿ, ಹಣ್ಣು ಹಾಗೂ ತಿಂಡಿ ತಿನಿಸುಗಳನ್ನು ತಂದು ವ್ಯಾಪಾರದಲ್ಲಿ ತೊಡಗಿದ್ದರು. ಸಾರ್ವಜನಿಕರು ಹಾಗೂ ಪಟ್ಟಣದ ವಿವಿಧ ಶಾಲೆ ಮಕ್ಕಳು ವಾರದ ಸಂತೆಗೆ ಆಗಮಿಸಿ ಖರೀಧಿಯಲ್ಲಿ ತೊಡಗಿದರು.
ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷೆ ತೇಜಸ್ವಿನಿ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಕರಿಯಪ್ಪ, ಸಿಆರ್‍ಪಿ ಸುನೀಲ್, ಮುಖ್ಯ ಶಿಕ್ಷಕ ನೇಮಿರಾಜು ಮತ್ತಿತರರಿದ್ದರು.



