ಮೀಸಲಾತಿ ಮೂಲಕ ದಲಿತರಿಗೆ ಸಿಗಬೇಕಾಗಿದ್ದ ಪ.ಪಂ. ಅಂಗಡಿ ಮಳಿಗೆ 6 ವರ್ಷ ಕಳೆದರೂ ಬಿಡ್‍ದಾರರಿಗೆ ನೀಡದೇ ಸತಾಯಿಸಲಾಗಿದೆ ಎಂದು ಮೂಡಿಗೆರೆ ತಾಲ್ಲೂಕು ಬಿ.ಹೊಸಳ್ಳಿ ಗ್ರಾ.ಪಂ. ಸದಸ್ಯ ಶಿವಪ್ರಸಾಧ್ ದೂರಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 6 ವರ್ಷದ ಹಿಂದೆ ಪೊಲೀಸ್ ಠಾಣೆ ಎದುರು ಇರುವ ಪ.ಪಂ.ಯ 5 ಮಳಿಗೆ ಹರಾಜು ಮಾಡಲಾಗಿತ್ತು. ಅದರಲ್ಲಿ 1 ಮಳಿಗೆ ಎಸ್ಸೀಎಸ್ಟಿ ಫಲಾನುಭವಿಗಳಿಗೆ ಮೀಸಲಿರಿಸಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಉಮೇಶ್ ಎಂಬುವರು ಭಾಗವಹಿಸಿ ಮಳಿಗೆ ಪಡೆದುಕೊಂಡಿದ್ದರು. ಆದರೆ ಇದೂವರೆಗೂ ಮಳಿಗೆ ಹಸ್ತಾಂತರಿಸಿಲ್ಲ.
ಇದನ್ನು ಪ್ರಶ್ನಿಸಿ ಕಳೆದ 6 ವರ್ಷದಿಂದ ಸತತವಾಗಿ ಪ.ಪಂ. ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಕುಂದುಕೊರತೆ ಸಭೆಯಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಕಾನೂನು ಸಮರ ನಡೆಸಿದ ಫಲವಾಗಿ ಇದೀಗ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸುವ ಮೂಲಕ ಫೆ.23ರೊಳಗೆ ವಿಳಂಬ ದೋೀರಣೆ ಬಗ್ಗೆ ಅಫಡವಿಟ್ ಸಲ್ಲಿಸಲು ಹಾಗೂ ಪ.ಪಂ. ಮುಖ್ಯಾಧಿಕಾರಿ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಆದೇಶಿಸಿದೆ ಎಂದು ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಕೆಳಗೂರು ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ನ್ಯಾಯಾಲಯದ ಮೂಲಕ ಮೀಸಲಾತಿ ಪಡೆಯುವ ವ್ಯವಸ್ಥೆ ಇಂದಿಗೂ ಇರುವುದು ನಾಚಿಗೇಡಿನ ಸಂಗತಿ. ನ್ಯಾಯಾಲಯ ಇಲ್ಲದಿದ್ದರೆ ಅಧಿಕಾರಿಗಳನ್ನು ಮಟ್ಟ ಹಾಕಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿತ್ತು. ಇಲ್ಲಿನ ದಲಿತ ವಿರೋಧಿ ಮನಸ್ಥಿತಿಯ ಆಡಳಿತಕ್ಕೆ ಕಾನೂನು ತನ್ನದೇ ರೀತಿಯಲ್ಲಿ ಉತ್ತರ ನೀಡಿದೆ. ಇನ್ನಾದರೂ ಪ.ಪಂ. ಅಧಿಕಾರಿಗಳು ಎಚ್ಚೆತ್ತು ಫಲಾನುಭವಿಗೆ ಮಳಿಗೆ ನೀಡಲು ಮುಂದಾಗಬೇಕು. ಇಲ್ಲವಾದರೆ ಕಾನೂನು ಉಲ್ಲಂಘನೆ ಆರೋಪದ ಮೇಲೆ ಮತ್ತೊಂದು ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.



