February 14, 2026

 

 

ಮೂಡಿಗೆರೆ ಪಟ್ಟಣ ಪಂಚಾಯತ್‌ಗೆ ಸೇರಿದ ವಿವಿಧ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಸರಕಾರ ಹಾಗೂ ನ್ಯಾಯಾಲಯದ ಆದೇಶ ಮೀರಿ ದಲಿತ ಸಮುದಾಯದವರಿಗೆ ಮೀಸಲಾತಿಯಡಿಯಲ್ಲಿ ಮಳಿಗೆ ಹಂಚಿಕೆ ಮಾಡದೇ ಅನ್ಯಾಯ ಮಾಡಿರುವ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣ ಒಕ್ಕೂಟ, ಮೂಡಿಗೆರೆ ಪದಾಧಿಕಾರಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಎಂ. ದೇಜಪ್ಪ ಮತ್ತು ಕಾರ್ಯದರ್ಶಿ ಕಿರುಗುಂದ ರಾಮಯ್ಯ ; ಮೂಡಿಗೆರೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಒಟ್ಟು 56 ವಾಣಿಜ್ಯ ಮಳಿಗೆಗಳಿದ್ದು, ಈ ವಾಣಿಜ್ಯ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು ರಾಜ್ಯ ಸರಕಾರ ಮತ್ತು ನ್ಯಾಯಾಲಯದ ಆದೇಶದಂತೆ ಪರಿಶಿಷ್ಟರಿಗೆ   ಮೀಸಲಾತಿಯಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಬೇಕಿದೆ. ಈ ವಾಣಿಜ್ಯ ಮಳಿಗೆಗಳನ್ನು 12 ವರ್ಷಗಳಿಗೆ ಬಾಡಿಗೆ ನೀಡಿ, ಬಾಡಿಗೆ ಅವಧಿ ಪೂರ್ಣಗೊಂಡ ನಂತರ ಪುನಃ ಟೆಂಡರ್ ಆಹ್ವಾನಿಸಿ ಮೀಸಲಾತಿಯಂತೆಯೇ ಮಳಿಗೆಗಳನ್ನು ಹಂಚಿಕೆ ಮಾಡಬೇಕಿದೆ. ಆದರೆ ಮೂಡಿಗೆರೆ ಪಟ್ಟಣ ಪಂಚಾಯತ್ 2019ನೇ ಸಾಲಿನಲ್ಲಿ 56 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿದ್ದು, ಈ ಹರಾಜು ಪ್ರಕ್ರಿಯೆ ವೇಳೆ  ಸಲಾತಿಯಂತೆ 9 ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡದೇ ಪರಿಶಿಷ್ಟರಿಗೆ ಅನ್ಯಾಯ ಮಾಡಲಾಗಿದೆ.

2019 ರಿಂದೀಚೆಗೆ ಈ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಡೆಸದೇ ಪಪಂ ಅಧಿಕಾರಿಗಳು ಸರಕಾರದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುತ್ತಾರೆ. 2019ರಿಂದೀಚೆಗೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸದ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಈ ಹಿಂದಿನ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮಳಿಗೆಗಳ ದುರಸ್ತಿ ನೆಪವೊಡ್ಡಿ ಈ ಮಳಿಗೆಗಳನ್ನು ಹಿಂದೆ ಬಾಡಿಗೆ ಪಡೆದವರಿಗೇ ಅಕ್ರಮವಾಗಿ ಮಳಿಗೆಗಳಲ್ಲಿ ಮುಂದುವರಿಯಲು ನಿರ್ಣಯ ಮಾಡಿ ಅವಕಾಶ ಕಲ್ಪಿಸಿರುತ್ತಾರೆ. ಪರಿಣಾಮ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ, ವಹಿವಾಟು ನಡೆಸಲು ಮುಂದಾಗಿದ್ದ ಪರಿಶಿಷ್ಟರಿಗೆ ಅನ್ಯಾಯವಾಗಿರುತ್ತದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ 56 ಮಳಿಗೆಗಳ ಪೈಕಿ   ಪರಿಶಿಷ್ಟರಿಗೆ ಒಟ್ಟು 9 ಮಳಿಗೆಗಳನ್ನು ಮೀಸಲಾತಿಯಡಿಯಲ್ಲಿ ಹಂಚಿಕೆ ಮಾಡಬೇಕಿದ್ದು, ಪಟ್ಟಣ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪರಿಶಿಷ್ಟರು ಈ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.

ಇನ್ನು ಪಟ್ಟಣದ ತಕ್ಕೋಳ ರಸ್ತೆ, ಕೆ.ಎಂ. ರಸ್ತೆ ಸೇರಿದಂತೆ ಪಟ್ಟಣ ಪಂಚಾಯತ್‌ಗೆ ಸೇರಿದ ವಿವಿಧ ಮಳಿಗೆಗಳನ್ನು ಮೂರು ದಶಕಗಳಿಗೂ ಹಿಂದೆ ಹರಾಜು ನಡೆಸಲಾಗಿದ್ದು, ನಂತರ ಬಹಿರಂಗ ಹರಾಜು ಮಾಡದ ಕಾರಣ, ಅಂಗಡಿ ಮಳಿಗೆಗಳು ಹಿಂದಿನ ಮಾಲಿಕರ ಹೆಸರಿನಲ್ಲಿಯೇ ಇದ್ದು, ವರ್ತಕರು ಮಾತ್ರ ಬದಲಾಗಿದ್ದಾರೆ. ಬಹುತೇಕ ಮಳಿಗೆಗಳಿಂದ ಪಟ್ಟಣ ಪಂಚಾಯಿತಿಗೆ ಪಾವತಿ ಮಾಡುವ ಬಾಡಿಗೆಯು ಇಂದಿಗೂ ಹೆಚ್ಚು ಮಾಡಿಲ್ಲ. ಆದರೆ, ಬಾಡಿಗೆ ಪಡೆದ ಮಾಲಿಕರು 30 ಸಾವಿರದಿಂದ 40 ಸಾವಿರಕ್ಕೆ ಒಳ ಬಾಡಿಗೆಗೆ ನೀಡಿ, 20-30 ಸಾವಿರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಳ ಬಾಡಿಗೆಯ ಹಿಂದೆ ಪಟ್ಟಣ ಪಂಚಾಯಿತಿಯ ಕೆಲವು ಅಧಿಕಾರಿಗಳ ಕೈವಾಡವೂ ಇರುವ ಬಗ್ಗೆ ಸಾರ್ವಜನಿಕರಿಂದ ಆರೋಪ ವ್ಯಕ್ತವಾಗಿದ್ದು, ಸ್ಥಳೀಯ ಸಂಸ್ಥೆಗಳ ಅಂಗಡಿ ಮಳಿಗಗಳು, ವಾಣಿಜ್ಯ ಸಂಕೀರ್ಣಗಳ ಹರಾಜಿಗೆ ಸ್ಪಷ್ಟ ನಿಯಮವಿದ್ದರೂ, ಅವುಗಳನ್ನು ಗಾಳಿಗೆ ತೂರಿ ಒಳ ಬಾಡಿಗೆ ನೀಡಲು ವ್ಯವಸ್ಥಿತವಾಗಿ ಕೆಲ ಮಾಲಿಕರಿಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ.

ಪಟ್ಟಣ ಪಂಚಾಯತ್ ಅಂಗಡಿ ಮಳಿಗೆಗಳಲ್ಲಿ ಹರಾಜು ಕೂಗಿದವರ ಪೈಕಿ ಒಳ ಬಾಡಿಗೆ ಕೊಟ್ಟಿರುವವರೇ ಹೆಚ್ಚು. ಕೆಲವರು ಹರಾಜು ಕೂಗುವಾಗ ತಾವು ಪಡೆದ ವ್ಯಾಪಾರ ಪರವಾನಗಿಯೇ ಬೇರೆ. ಈಗಿರುವ ವ್ಯಾಪಾರವೇ ಬೇರೆಯಾಗಿದೆ. ಒಳ ಬಾಡಿಗೆ ಪಡೆದ ಕೆಲವು ವ್ಯಾಪಾರಿಗಳು ಪರವಾನಗಿ ಪಡೆಯದೇ ವ್ಯಾಪಾರ ನಡೆಸುತ್ತಿದ್ದರೂ ಪಟ್ಟಣ ಪಂಚಾಯಿತಿ ಕಣ್ಮುಚ್ಚಿ ಕುಳಿತಿದೆ. ಹರಾಜು ಪಡೆದ ಕೆಲವು ಮಾಲಿಕರು ಮುಲಾಜಿಲ್ಲದೇ ತಮ್ಮ ಸ್ವಂತ ಕಟ್ಟಡದಂತೆ 20-30 ಸಾವಿರಕ್ಕೂ ಅಧಿಕ ಮೊತ್ತಕ್ಕೆ ಒಳ ಬಾಡಿಗೆ ನೀಡುತ್ತಿದ್ದಾರೆ. ಅಂಗಡಿ ಮಳಿಗೆಗಳ ನಿಯಮಗಳನ್ನು ಗಾಳಿಗೆ ತೂರಿರುವ ಪಟ್ಟಣ ಪಂಚಾಯಿತಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತಿದೆ.

ಈ ವಾಣಿಜ್ಯ ಮಳಿಗೆಗಳಲ್ಲಿರುವ ಹಾಲಿ ಬಾಡಿಗೆದಾರರ ಬಾಡಿಗೆ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್ ಆಹ್ವಾನಿಸುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿ ಅವರು ಸಕ್ಷಮ ಅಧಿಕಾರಿ, ಕರ್ನಾಟಕ ಸಾರ್ವಜನಿಕ ಆವರಣ ಅಧಿನಿಯಮದಡಿ ಹೊರಹಾಕುವಿಕೆ ಅಧಿನಿಯಮ-1974ರ ಕಾಯ್ದೆಯಡಿ ಸೂಚಿಸಿ ಪತ್ರ ಬರೆದಿದ್ದು, ಅದರಂತೆ ಸಕ್ರಮ ಅಧಿಕಾರಿ ಮೂಡಿಗೆರೆ ಪಪಂ ಮುಖ್ಯಾಧಿಕಾರಿಗೆ ಹಾಲಿ ಬಾಡಿಗೆದಾರರನ್ನು ತೆರವು ಮಾಡಿ ಮಳಿಗೆಗಳಿಗೆ ಹೊಸದಾಗಿ ಟೆಂಡರ್ ಕರೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ಪತ್ರ ಬರೆದಿರುತ್ತಾರೆ. ಆದರೆ ಮೂಡಿಗೆರೆ ಪಪಂ ಮುಖ್ಯಾಧಿಕಾರಿ ಇದುವರೆಗೂ ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ.

ಆದ್ದರಿಂದ, ಮೂಡಿಗೆರೆ ಪಪಂ ವ್ಯಾಪ್ತಿಯಲ್ಲಿರುವ ವಿವಿಧ ವಾಣಿಜ್ಯ ಮಳಿಗೆಗಳಲ್ಲಿರುವ ಹಾಲಿ ಬಾಡಿಗೆದಾರರನ್ನು ಹೊರಹಾಕಲು ಅಗತ್ಯ ಕ್ರಮಕೈಗೊಳ್ಳಬೇಕು ಮತ್ತು ಪರಿಶಿಷ್ಟರಿಗೆ ವಾಣಿಜ್ಯ ಮಳಿಗೆಗಳನ್ನು ಮೀಸಲಾತಿ ಅನುಸಾರ ಹಂಚಿಕೆ ಮಾಡಲು ಸೂಕ್ತ ಕ್ರಮವಹಿಸಬೇಕು ಹಾಗೂ ಪಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಕಾರಕ್ಕೆ ಇದುವರೆಗೂ ನಷ್ಟವಾಗಿರುವ ಕೋಟ್ಯಂತರ ರೂ. ಹಣದ ಬಗ್ಗೆಯೂ ಪರಿಶೀಲಿಸಿ ಈ ನಷ್ಟವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ