ಈಜಲು ತೆರಳಿದ್ದ ಇಬ್ಬರು ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳಿ ಸಮೀಪ ನಡೆದಿದೆ.
ಅಭಿಷೇಕ್ (27) ಹಾಗೂ ಯೋಗೀಶ್ (17) ಮೃತ ದುರ್ದೈವಿಗಳು. ಮೃತ ಯುವಕರಿಬ್ಬರು ಮೂಲತಃ ಕೊಡಗು ಜಿಲ್ಲೆಯವರು. ಮೃತ ಅಭಿಷೇಕ್ ಅಕ್ಕ ಕಳಸದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಗೆ ಬಂದಿದ್ದ ಇಬ್ಬರು ಭದ್ರಾ ನದಿಯಲ್ಲಿ ಈಜಲು ಹೋದಾಗ ಭದ್ರಾ ನದಿಯ ಆಳದ ಅರಿವಿಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರ ನೆರವಿನಿಂದ ಶನಿವಾರ ಮೃತ ದೇಹಕ್ಕಾಗಿ ಶೋಧ ನಡೆಸಿದ್ದರು. ಆದರೆ ಸಂಜೆವರೆಗೂ ಮೃತದೇಹ ಪತ್ತೆಯಾಗಿರಿಲಿಲ್ಲ. ಸಂಜೆಯಾದ ಕಾರಣ ಮೃತದೇಹದ ಶೋಧ ಕಾರ್ಯವನ್ನ ನಿಲ್ಲಿಸಲಾಗಿತ್ತು. ಭಾನುವಾರ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಭಾನುವಾರ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ.
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



