ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸಲು ಕಾನೂನು ಅರಿವು ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಪಂಚಾಯತಿಯ ಶ್ರೀ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಔಟ್‍ಲಾಡ್ ಇಂಡಿಯಾ ಫೌಂಡೇಶನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಕಾನೂನು ಅರೆಕಾಲಿಕ ಸ್ವಯಂ ಸೇವಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಗಳಿಂದ ಕೂಡಿರುವ ನಮ್ಮ ದೇಶದ ಬಹುತೇಕ ಜನರಿಗೆ ತಮಗೆ ಸಿಗಬೇಕಾದ ಕಾನೂನು ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಸಂವಿಧಾನವು ಪ್ರತಿಯೊಬ್ಬರಿಗೂ ‘ಸಮಾನ ನ್ಯಾಯ’ವನ್ನು ನೀಡಿದೆ. ಆದರೆ ಶಿಕ್ಷಣದ ಕೊರತೆ ಮತ್ತು ಅರಿವಿಲ್ಲದ ಕಾರಣ ಅನೇಕರು ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಜನರಿಗೆ ಕಾನೂನು ಸೇತುವೆಯಾಗಿ ಕೆಲಸ ಮಾಡುವುದು ಅರೆಕಾಲಿಕ ಸ್ವಯಂಸೇವಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಪರಿಹಾರ ಪಡೆಯುವ ಹಕ್ಕಿನ ಬಗ್ಗೆ ಉದಾಹರಣೆ ನೀಡಿದ ನ್ಯಾಯಾಧೀಶರು, ಒಬ್ಬ ವ್ಯಕ್ತಿಗೆ ಕಾನೂನಿನ ಅರಿವಿದ್ದರೆ ಮಾತ್ರ ಆತ ತನಗೆ ಸಂಭವಿಸಿದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯ. ಇಲ್ಲದಿದ್ದರೆ ಆತ ಕಾನೂನು ಸೌಲಭ್ಯಗಳಿಂದ ದೂರವೇ ಉಳಿಯುತ್ತಾನೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಾನೂನು ನೆರವು ನೀಡಲು 1987ರ ಕಾನೂನು ಸೇವೆಗಳ ಕಾಯ್ದೆಯಡಿ ಕಾನೂನು ಸೇವಾ ಪ್ರಾಧಿಕಾರಗಳು ಅಸ್ವಿತ್ವಕ್ಕೆ ಬಂದಿವೆ ಎಂದು ಹೇಳಿದರು.
ಕೋರ್ಟ್ ವ್ಯಾಜ್ಯಗಳನ್ನು ಸುಲಭವಾಗಿ ಮತ್ತು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್ಸ್ ಜನಸಾಮಾನ್ಯರು ಮತ್ತು ಕಾನೂನು ವ್ಯವಸ್ಥೆಯ ಕೊಂಡಿಯಾಗಿ ಕೆಲಸ ಮಾಡಬೇಕು. ವಾರ್ಷಿಕ ರೂ. 3 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರು, ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರು, ಮಕ್ಕಳು, ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ನೆರವು ಮತ್ತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜನರಿಗೆ ಕಾನೂನಿನ ಅರಿವು ಮೂಡಿಸುವುದು ಮತ್ತು ನೆರವು ಬೇಕಾದವರನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಳಿ ಕರೆತರುವುದು ಕಾನೂನು ಅರೇಕಾಲಿಕ ಸ್ವಯಂ ಸೇವಕರ ಜವಾಬ್ದಾರಿ ಎಂದು ಕಿವಿಮಾತು ಹೇಳಿದ ಅವರು, ಈ ತರಬೇತಿ ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ವಿವಿಧ ಕಾಯ್ದೆಗಳ ಬಗ್ಗೆ ಪರಿಣಿತರಿಂದ ಮಾಹಿತಿ ನೀಡಲಾಗುವುದು. ಈ ತರಬೇತಿಯು ಕೇವಲ ದಾಖಲೆಗಾಗಿ ಸೀಮಿತವಾಗದೇ, ಜನರಿಗೆ ನೇರವಾದ ಪ್ರಯೋಜನ ನೀಡುವಂತಾಗಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ನ್ಯಾಯಾಧೀಶರಾದ ಕುಲಕರ್ಣಿ, ಪ್ರಕಾಶ್, ಔಟ್‍ಲಾಡ್ ಇಂಡಿಯಾ ಫೌಂಡೇಶನ್ ತರಬೇತುದಾರರಾದ ಕೆ.ವಂದನಾ, ಎಸ್.ತುಶಿತಾ ಹಾಗೂ ಕಾನೂನು ಅರೆಕಾಲಿಕ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿದ್ದರು.



