ಮಾರ್ಚ್ 6 ರಂದು ರಾಜ್ಯ ಸರಕಾರ ಮಂಡಿಸುವ ಬಜೆಟ್‍ನಲ್ಲಿ ಆದಿವಾಸಿ ಅಭಿವೃದ್ಧಿಗೆ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಳಿ ಮೈಸೂರು ಮಾಜಿ ಅಧ್ಯಕ್ಷ ಮುತ್ತಪ್ಪ ಒತ್ತಾಯಿಸಿದರು.
ಅವರು ಬುಧವಾರ ಮೂಡಿಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಆದಿವಾಸಿಗಳ ಸಮಸ್ಯೆಗಳನ್ನು ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಪರಿಹಾರ ಸಿಕ್ಕಿಲ್ಲ. ಈ ಬಾರಿಯ ಬಜೆಟ್‍ನಲ್ಲಿ ಪರಿಶಿಷ್ಟ ಪಂಗಡದವರಿಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಜಿಲ್ಲಾ ಮಟ್ಟದಲ್ಲಿದ್ದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಎಲ್ಲಾ ತಾಲೂಕಿನಲ್ಲಿ ಸ್ಥಾಪಿಸಬೇಕು. ಅರಣ್ಯದಂಚಿನಲ್ಲಿ ವಾಸಿಸುವ 13 ಬುಡಕಟ್ಟು ಜನಾಂಗಕ್ಕೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ವಿಶೇಷ ನೇರ ನೇಮಕಾತಿ ಆದೇಶಿಸಿ ಅನುಷ್ಟಾನಕ್ಕೆ ತರಬೇಕು. ಎಸ್ಟೇಟ್ ಲೈನ್‍ಗಳಲ್ಲಿ ವಾಸಿಸುವ ಹಸಲರು ಜನಾಂಗದವರು ಸ್ವತಂತ್ರವಾಗಿ ಜೀವನ ನಡೆಸಲು ಸ್ವಂತ ಸೂರು ನಿರ್ಮಿಸಿಕೊಡಬೇಕು. ಆದಿವಾಸಿ ಅಲೆಮಾರಿ, ಅರೆಅಲೆಮಾರಿ ನಿಗಮದಿಂದ ನೀಡುವ ನೇರ ಸಾಲ ಸೌಲಭ್ಯ ಗಂಗಾಕಲ್ಯಾಣ ಇನ್ನಿತರ ಸೌಲಭ್ಯಗಳ ಗುರಿ ಅಧಿಕಗೊಳಿಸಬೇಕೆಂದು ಆಗ್ರಹಿಸಿದರು.
ಹಸಲರು ಸಂಘದ ಜಿಲ್ಲಾಧ್ಯಕ್ಷ ಗೋಪಾಲ ಮಾತನಾಡಿ ಆದಿವಾಸಿಗಳಿಗೆ ನೀಡುವ ಪೌಷ್ಟಿಕ ಆಹಾರ ಯೋಜನೆ ಹಕ್ಕಿಪಿಕ್ಕಿ, ಡೋಂಗಿಗರೇಸಿಯಾ, ಮಲೆಕುಡಿಯ, ಮೇಧ, ಮರಾಠಿನಾಯಕ್ ಜನಾಂಗಕ್ಕೂ ವಿಸ್ತರಿಸಬೇಕು. ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜಮೀನು ರಹಿತರಿಗೆ ತಲಾ 2 ಎಕರೆ ಜಮೀನು ನೀಡಬೇಕು. ಆದಿವಾಸಿಗಳಿಗೆ ಜಮೀನು ಖರೀದಿ ಭೂಒಡೆತನ ಯೋಜನೆಯ ಹೆಚ್ಚಿಸಿ ಅನುμÁ್ಠನಗೊಳಿಸಬೇಕು. ಅರಣ್ಯ ಕಾಯಿದೆ ಅಡಿಯಲ್ಲಿ ನೀಡಿರುವ ಜಮೀನುಗಳಿಗೆ ಬೆಳೆಸಾಲ, ಬೆಳೆ ವಿಮೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು. ಮುಖ್ಯವಾಗಿ ಕಲ್ಯಾಣ ಕರ್ನಾಟಕ ಮೀಸಲಾತಿ ನಿಯಮ ಗೆಜೆಟ್ ನೋಟಿಫಿಕೇಷನ್ ಜಾರಿಮಾಡಿ, ಯಾವುದೇ ತಿದ್ದುಪಡಿಗೊಳಿಸದೇ ಹಿಂದೆ ಇದ್ದಂತೆ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜೇಂದ್ರ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎಚ್.ಕೆ.ಕೃಷ್ಣಪ್ಪ, ಮುಖಂಡರಾದ ಹರಿಶ್ ಸಬ್ಬೇನಹಳ್ಳಿ, ರಮೇಶ್, ಸುರೇಶ್ ಉಪಸ್ಥಿತರಿದ್ದರು.



