ಪೌರ ಕಾರ್ಮಿಕರು ನಗರ ಸ್ವಚ್ಚತೆಯ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಹರಿಚಿತ್ತ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೊಂದು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದ ವರ್ಷಕ್ಕೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತದೆ, ಹಾಗೂ ಹರಿಚಿತ್ತ ಫೌಂಡೇಶನ್ ರವರು ಸಹ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.
ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ತಮ್ಮ ಕೆಲಸವನ್ನು ಪ್ರಾರಂಭಿಸಿ ನಗರ ಸ್ವಚ್ಚತೆ ಕಾಪಾಡಲು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನೊಡಿಕೊಳ್ಳಬೇಕೆಂದು ತಿಳಿಸಿದರು.
ನಗರವನ್ನು ಸ್ವಚ್ಚ ಸುಂದರಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿ ಸಮಾಜದಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಮೊಹನ್ ಮಾತನಾಡಿ ಹರಿಚಿತ್ತ ಪೌಂಡೇಶನ್ ರವರು ಮಾಡುತ್ತಿರುವ ಕೆಲಸ ಶ್ಲಾಘನೀಯ, ನಗರದ ಸ್ವಚ್ಚತೆಗೆ ಶ್ರಮಿಸುವ ಪೌರ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನ ಅರಿಸಬೇಕು, ಹಾಗೂ ಸಾಮಾನ್ಯ ಖಾಯಿಲೆಗಳಾದ ಕೆಮ್ಮು, ಶೀತ, ಉಸಿರಾಟ ಸಮಸ್ಯೆಗಳನ್ನು ತಡೆಗಟ್ಟಲು ಬೀಡಿ, ಸಿಗರೇಟ್ ನಂತಹ ದುರಭ್ಯಾಸಗಳನ್ನು ತ್ಯಜಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಬಡವರು, ಸಿರಿವಂತರು ಎಂಬ ತಾರತಮ್ಯವಿಲ್ಲದೆ ಬುದ್ಧಿ ಮತ್ತು ಆರೋಗ್ಯವನ್ನು ದೇವರು ನೀಡಿದ್ದಾನೆ, ಕುಟುಂಬದಲ್ಲಿ ಹಿರಿಯರು ಮಕ್ಕಳಿಗೆ ಛಲವನ್ನು ತುಂಬಬೇಕು, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕಾದರೆ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡಿ ಡಾಕ್ಟರ್, ಇಂಜಿನಿಯರ್, ಕಮಿಷನರ್ ನಂತಹ ಉನ್ನತ ಸ್ಥಾನವನ್ನು ಏರಿದಾಗ ಕುಟುಂಬವು ಸಮಾಜದ ಮುನ್ನಲೆಗೆ ಬರಲು ಸಾಧ್ಯ ಹಾಗೂ ಮನೆಯ ಇತರೆ ಸದಸ್ಯರಿಗೂ ಇದು ಮೆಟ್ಟಿಲಾಗುತ್ತದೆ ಎಂದು ಕಿವಿಮಾತು ಹೇಳಿದರು.
ಹರಿಚಿತ್ತ ಫೌಂಡೇಶನ್ ಅಧ್ಯಕ್ಷೆ ಚೈತ್ರ ಹರೀಶ್ ಮಾತನಾಡಿ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಪೌರಕಾರ್ಮಿಕರಿಗೆ ಸಾರ್ವಜನಿಕರ ಪರವಾಗಿ ನುಡಿ ನಮನ ಸಲ್ಲಿಸಲಾಗುತ್ತಿದ್ದು, ಪೌರಕಾರ್ಮಿಕರ ಕಾರ್ಯವನ್ನು ನೃತ್ಯದ ಮೂಲಕ ಹೇಳಲಾಗುತ್ತಿದೆ, ಅವರು ಕೇವಲ ಪೌರಕಾರ್ಮಿಕರಲ್ಲ, ನಮ್ಮ ಆರೋಗ್ಯದ ಕಾವಲುಗಾರರು ಹಾಗೂ ದೇಶದ ಬೆನ್ನೆಲುಬು ಸಹ ಆಗಿದ್ದಾರೆ, ಅವರಿಗೆ ಉಚಿತ ಆರೋಗ್ಯ ತಪಾಸಣೆ, ಸಂಗೀತ ಹಾಗೂ ನೃತ್ಯ ರಸದೌತಣ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸಮಾಜದ ಭಾಗವಾಗಿರುವ ನಾವು ಸಮಾಜ ಮುಖಿ ಕೆಲಸವನ್ನು ಮಾಡಬೇಕು ಎನ್ನುವುದು ಹರಿಚಿತ್ತ ಫೌಂಡೇಶನ್ ಉದ್ದೇಶವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಮಾಜಮುಖಿ ಕೆಲಸಗಳನ್ನು ನಮ್ಮ ಸಂಸ್ಥೆ ವತಿಯಿಂದ ನೆಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರಿಚಿತ್ತ ಫೌಂಡೇಶನ್ ಸಂಸ್ಥಾಪಕ ಹರೀಶ್, ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ್, ಡಾ. ದೀಪಕ್‍ಆರಾಧ್ಯ, ಡಾ. ಪೊನ್ನೂಪ, ಬಿಜೆಪಿ ಮುಖಂಡ ದೀಪಕ್‍ದೊಡ್ಡಯ್ಯ, ಜೆಸಿಐ ಅಧ್ಯಕ್ಷ ತಿಲಕ್ ಉಪಸ್ಥಿತರಿದ್ದರು. ಸಾಗರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಪುಷ್ವಾರ್ಚನೆ ಮಾಡಿ ಸನ್ಮಾನಿಸಲಾಯಿತು,



