ಹಿರಿಯರನ್ನು ಕಡೆಗಣಿಸುವ ಕಾಲಘಟ್ಟದಲ್ಲಿ ಇಂದು ಹಿರಿಯರನ್ನು ಒಂದೆಡೆ ಸೇರಿಸಿ ಅವರನ್ನು ಹುರಿದುಂಬಿಸಿ ಸಂಭ್ರಮ ಪಡುವ ಕಾರ್ಯಕ್ರಮವನ್ನು ನಾನೆಲ್ಲೂ ನೋಡಲ್ಲವೆಂದು ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸುಶೀಲಮ್ಮ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರಿಂದ ಏರ್ಪಡಿಸಿದ್ದ ಮಲೆನಾಡು ಮಹಿಳಾ ಸುಗ್ಗಿ ಉತ್ಸವ, ಹಿರಿಯರ ಜೀವನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರನ್ನೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿಸಿ, ಅವರನ್ನು ಕಿರಿಯರನ್ನಾಗಿ ಮಾಡಿ, ಮುಂದಿನ ದಿನ ಇನ್ನಷ್ಟು ಸಂಭ್ರಮದಿಂದ ಜೀವಿಸುವಂತಹ ವಾತಾವರಣ ಸೃಷ್ಟಿ ಮಾಡಿರುವುದು ನಿಜವಾಗಿಯೂ ಶ್ಲಾಘನೀಯ. ಇಲ್ಲಿ ಒಟ್ಟು 35 ಹಿರಿಯ ದಂಪತಿಯನ್ನು ಹುಡುಕಿ ಒಂದೇ ವೇದಿಕೆಯಲ್ಲಿ ಸೇರಿಸಿ, ನಗಿಸಿ, ಸಂಭ್ರಮಿಸಿರುವುದು ಪುಣ್ಯದ ಕಾರ್ಯವೆಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಉತ್ತರ ಕರ್ನಾಟಕ ಮಹಿಳೆಯರು ಮಾಡುವ ನಾಗರಪಂಚಮಿ ಹಬ್ಬ, ಕೊಡಗಿನ ಮಹಿಳೆಯರು ನಡೆಸುವ ಹುತ್ತರಿಹಬ್ಬವನ್ನು ನಾನು ನೋಡಿದ್ದೇನೆ. ಆ ಹಬ್ಬದಲ್ಲಿ ಮಹಿಳೆಯರ ನಡುಗೆ, ತೊಡುಗೆ ಬಗ್ಗೆ ಗಮನಿಸಿದಾಗ, ನಮ್ಮ ಮಲೆನಾಡು ಕೂಡ ಸಾಂಸ್ಕøತಿಕ ಹಾಗೂ ಜಾನಪದ ಸೊಗಡು ಬೀರುವ ನಾಡಾಗಿದೆ. ಹಾಗಾಗಿ ಮಲೆನಾಡಿನ ಸಾಂಸ್ಕøತಿಕ ವೈಭವ ಹಾಗೂ ಹಿರಿಯರನ್ನು ಗುರುತಿಸುವಂತಹ ಮಹದಾಸೆಯನ್ನು ನೆರವೇರಿಸಲು ಎಲ್ಲಾ ಮಹಿಳೆಯರ ಸಹಕಾರದಿಂದ ಸಾಧ್ಯವಾಗಿದೆ. ಇಂತಹ ಕಾರ್ಯಕ್ರಮ ಮುನ್ನೆಡೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿಧ ಎಚ್.ಗೋಪಾಲ್ ಹಾಸ್ಯ ಚಟಾಕಿ ಮುಳಕ ಜನರನ್ನು ರಂಜಿಸಿದರು. ಹಿರಿಯ ಸಾಂಪ್ರದಾಯಕ ಉಡುಗೆ ತೊಡುಗೆಗಳ ನಡಿಗೆ ಮತ್ತು ಆದರ್ಶ ದಂಪತಿಗಳ ಸ್ಪರ್ಧೆ ಜತೆಗೆ ಮಲೆನಾಡ ಉಡುಗೆ, ತೊಡುಗೆ, ನಡಿಗೆ, ಸೋಬಾನೆ ಪದ, ಮದುವೆ ಹಾಡುಗಳು, ಕಂಸಾಳೆ, ಜಾನಪದ ನೃತ್ತಯ, ಕೋಲಾಟ, ಇತರೇ ನೃತ್ಯ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಮಲ ಮಂಚೇಗೌಡ ವಹಿಸಿದ್ದರು. ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕಿ ಡಾ.ಪೂರ್ವಿ ಜಯರಾಜ್, ವಕೀಲೆ ರೇಷ್ಮಾ, ಮಾಜಿ ಸಚಿವೆ ಮೋಟಮ್ಮ, ಉಪಾಧ್ಯಕ್ಷೆ ಕಲಾವತಿ ರಾಜಣ್ಣ, ಕಾರ್ಯದರ್ಶಿ ರೇಖಾ ರವಿರಾಜ್, ಪ್ರಧಾನ ಸಂಚಾಲಕಿ ಮಾಲ ದಶರಥ್, ಸಂಚಾಲಕಿ ಅಶ್ವಿನಿ ಸಂತೋಷ್, ಅನಿತಾ ಸುಧೀರ್ ಮತ್ತಿತರರಿದ್ದರು.



