ಬಾಲಮೇಳ ಕಾರ್ಯಕ್ರಮವು ಮಕ್ಕಳ ಸುಪ್ತ ಪ್ರತಿಭೆ, ಸೃಜನಶೀಲತೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವ ಒಂದು ವರ್ಣರಂಜಿತ ವೇದಿಕೆಯಾಗಿದೆ ಎಂದು ಮೂಡಿಗೆರೆ ಸಿ.ಡಿ.ಪಿ.ಒ ಮಹೇಶ್ ಹೇಳಿದ್ದಾರೆ.
ಮೂಡಿಗೆರೆ ತಾಲೂಕಿನ ಸುಭಾಷ್ ನಗರ ಗ್ರಾಮದ ಇಂದಿರಾನಗರ 1 ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲಮೇಳ ಮತ್ತು ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಹೊರತೆಗೆಯಲು ಬಾಲಮೇಳ ಕಾರ್ಯಕ್ರಮ ಉತ್ತಮವಾಗಿದ್ದು, ಹಾಗೆಯೆ ಶಾರದಾ ಪೂಜೆ ಜ್ಞಾನ, ಕಲೆ ಮತ್ತು ವಿದ್ಯೆಯ ದೇವತೆಯನ್ನು ಆರಾಧಿಸುವ ಪವಿತ್ರ ಹಬ್ಬವಾಗಿದೆ ಎಂದರು.
ಈ ಪೂಜೆಯು ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಮತ್ತು ಶಿಕ್ಷಣತಜ್ಞರಿಗೆ ಅತ್ಯಂತ ವಿಶೇಷ. ಸರಸ್ವತಿಯನ್ನು ಪೂಜಿಸುವುದರಿಂದ ವಿದ್ಯೆ, ಬುದ್ಧಿ ಮತ್ತು ಜ್ಞಾನ ಲಭಿಸುತ್ತದೆ ಎಂದು ನುಡಿದರು.
ಇದೆ ವೇಳೆ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಹಿರಿಯ ಮೇಲ್ವಿಚಾರಕಿ ಶೋಭಾ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚಿನದಾಗಿ ಹಮ್ಮಿಕೊಳ್ಳುವ ಮುಖೇನ ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆ ಮತ್ತು ನಮ್ಮ ಸಂಸ್ಕೃತಿಯನ್ನ ಪರಿಚಯವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಕ್ಕಳ ಪೋಷಕರು ಅಂಗನವಾಡಿ ಕಾರ್ಯಕರ್ತೆ ಅನಿತ ಮತ್ತು ಅಂಗನವಾಡಿ ಸಹಾಯಕಿ ಶ್ವೇತ ರವರನ್ನು ಸನ್ಮಾನಿಸಿ ಗೌರವಿಸಿದರು.
ಮೇಲ್ವಿಚಾರಕಿ ಪವಿತ್ರ, ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ದಿವ್ಯ, ಮಕ್ಕಳು, ಪೋಷಕಿ ಜೈನಾಭಿ, ಇತರೆ ಮಕ್ಕಳ ಪೋಷಕರು, ಊರಿನ ಗ್ರಾಮಸ್ಥರು, ಅಕ್ಕ ಪಕ್ಕದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇತರರು ಪಾಲ್ಗೊಂಡಿದ್ದರು.



