ಪರವಾನಗಿ ಪಡೆಯದೇ ಅಕ್ರಮವಾಗಿ ಮರ ಸಾಗಿಸುತ್ತಿರುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮೂಡಿಗೆರೆ ಪಟ್ಟಣದ ಹೊರವಲಯದ ಸಿದ್ಧಾರ್ಥವನದ ಬಳಿ ಗುರುವಾರ ರಾತ್ರಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಪರ್ಮಿಟ್ ಪಡೆಯದೇ ಅಕ್ರಮವಾಗಿ ಹಲಸಿನ ಮರಗಳ ತುಂಡುಗಳನ್ನು ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿದ್ದಂತೆ, ಅರಣ್ಯ ಇಲಾಖೆ ಅಧಿಕಾರಿಗಳು ಕೆ.ಎಂ.ರಸ್ತೆಯ ಸಿದ್ಧಾರ್ಥವನದ ಬಳಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕಡಿಯಲ್ಪಟ್ಟ ಸುಮಾರು 1.ಲಕ್ಷ ರೂ ಬೆಲೆಬಾಳುವ ಹಲಸಿನ ಮರದ ದಿಂಡಿಗಳನ್ನು ಸಾಗಿಸಲಾಗುತ್ತಿರುವುದು ಕಂಡು ಬಂದಿದೆ. ಕೂಡಲೇ ಅಕ್ರಮ ಮರ ಸಾಗಾಟಕ್ಕೆ ಬಳಸಿದ ವಾಹನ ವಶಪಡಿಸಿಕೊಂಡು ಆರೋಪಿಗಳಾದ ಹಳೆಮೂಡಿಗೆರೆ ಗ್ರಾಮದ ಶಿವಪ್ಪ ಹಾಗೂ ಗುತ್ತಿ ಗ್ರಾಮದ ವಿಕ್ರಮ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಡಿಸಿಎಫ್ ರಮೇಶ್ ಬಾಬು, ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ, ಆರ್‍ಎಫ್‍ಒ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಚಾರಣೆಯಲ್ಲಿ ಡಿವೈಆರ್‍ಎಫ್‍ಒಗಳಾದ ಅಶ್ವಥ್, ಬಸವರಾಜ್ ಬಗಲಿ, ಬೀಟ್ ಫಾರಿಸ್ಟ್‍ಗಳಾದ ಪರಮೇಶ್, ಸುರೇಶ್, ವಾಚರ್ ಉದಯ್, ವಾಹನ ಚಾಲಕರಾದ ಸುಮಂತ್, ನವರಾಜ್ ಭಾಗವಹಿಸಿದ್ದರು.



