ಆಲ್ದೂರು ಸಮೀಪದ ಬನ್ನೂರು ಬಿಳಿಗಿರಿ ಎಸ್ಟೇಟ್ ನ
ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ.
ರಮೇಶ್ (27) ಮಹೇಶ್ (39) ಶನಿವಾರ ಮೀನು ಹಿಡಿಯಲು
ತೆರಳಿ ಕೆರೆಯಲ್ಲಿ ಮುಳುಗಿ
ಮೃತಪಟ್ಟಿರುವ ಕಾರ್ಮಿಕರು.
ಮೃತಪಟ್ಟಿರುವ ಇಬ್ಬರಲ್ಲಿ ರಮೇಶ್ (27) ಆಗಳ ಗ್ರಾಮದ ಕಾಫಿ ಬೆಳೆಗಾರ ಬಿಳಿಯಪ್ಪಗೌಡ ಎಂಬುವವರ ಬಿಳಿಗಿರಿ ಎಸ್ಟೇಟ್ ನಲ್ಲಿ ಎರಡುವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು,ಕೊಪ್ಪ ತಾಲ್ಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿಗಳಾಗಿದ್ದಾರೆ.
ಕಡವಂತಿ ಗ್ರಾಮದ ನಿವಾಸಿಯಾಗಿರುವ ಮಹೇಶ್ (39) ಕುಟುಂಬದೊಂದಿಗೆ ಬಿಳಿಗಿರಿ ಎಸ್ಟೇಟ್ ನಲ್ಲಿ ಒಂದುವರೆ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದು ಲೈನ್ ನಲ್ಲಿ ವಾಸವಿದ್ದರು.
ಶನಿವಾರ ರಮೇಶ್,ಮಹೇಶ್ ಮತ್ತು ದಿವಾಕರ್ ಒಟ್ಟಿಗೆ ಎಸ್ಟೇಟ್ ನ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದು, ದಿವಾಕರ್ ತಾನು ಆಗಳಕ್ಕೇ ಹೋಗಿ ಬರುತ್ತೇನೆ ಮೀನು ಮನೆಗೆ ಕೊಡಿ ಎಂದು ತಿಳಿಸಿ ಹೋಗಿದ್ದು, ಸಂಜೆ
ವಾಪಸ್ ಮನೆಗೆ ಬಂದು ರಮೇಶ್ ಹಾಗೂ ಮಹೇಶ್ ಇನ್ನೂ ಮನೆಗೆ ಬಂದಿಲ್ಲವೇ ಎಂದು ವಿಚಾರಿಸಿದ್ದು, ಕೆರೆಯ ಬಳಿ ಹೋಗಿ ನೋಡಿದಾಗ ರಮೇಶನ ಚಪ್ಪಲಿ ಮಾತ್ರ ದಡದಲ್ಲಿ ಕಂಡುಬಂದಿತ್ತು.
ರಾತ್ರಿ ಆಲ್ದೂರು ಪೊಲೀಸ್ ಠಾಣೆಗೆ ತಮ್ಮ ಮಗ ರಮೇಶ ಹಾಗೂ ಮಹೇಶ್ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮೃತಪಟ್ಟಿರಬಹುದು ಎಂಬ ಶಂಕೆ ಇದ್ದು ದಯವಿಟ್ಟು ಕೆರೆಯಲ್ಲಿ ಹುಡುಕಿ ಕೊಡಬೇಕೆಂದು ರಮೇಶ್ ರವರ ತಂದೆ ಕುಮಾರ ದೂರು ನೀಡಿದ್ದಾರೆ.
ಆದರೆ ಮಹೇಶನ ಸಹೋದರ ಗಣೇಶ್, ಎಸ್ಟೇಟ್ ನ ಕೆರೆಯಲ್ಲಿ, ಮೀನು ಹಿಡಿಯಲು ಹೋದಾಗ ರಮೇಶ ಹಾಗೂ ಮಹೇಶ್ ರವರೊಂದಿಗೆ ದಿವಾಕರ್ ಕೂಡ ತೆರಳಿದ್ದು ಆತನ ಮೇಲೆ ಅನುಮಾನವಿದೆ ಆದ್ದರಿಂದ ಆತನನ್ನು ಸೂಕ್ತ ವಿಚಾರಣೆ ನಡೆಸಬೇಕೆಂದು ಆಲ್ದೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಶವವನ್ನು ಹೊರ ತೆಗೆಯಲು ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಯತ್ನ ನಡೆಸಿದರು ಶವಗಳು ಪತ್ತೆಯಾಗದ ಕಾರಣ ಮೂಡಿಗೆರೆ ಹೆಸ್ಗಲ್ ಶೌರ್ಯ ವಿಪತ್ತು ಘಟಕದ ಮುಳುಗು ತಜ್ಞರಾದ ರಾಕೇಶ್ ಮತ್ತು ಅಭಿಲಾಶ್ ರವರ ನೆರವಿನೊಂದಿಗೆ ಶವವನ್ನು ಹೊರ ತೆಗೆದಿದ್ದು, ಶೌರ್ಯ ಘಟಕದ ಪ್ರತಾಪ್, ಪ್ರಶಾಂತ್, ಅನಿಲ್, ಶ್ರೀ ಕೃಷ್ಣ ಆಂಬುಲೆನ್ಸ್ ಸಿಬ್ಬಂದಿಗಳು ಸಹಕಾರ ನೀಡಿದರು.
ಪಿಎಸ್ಐ ರವಿ ಜಿ.ಎ ನೇತೃತ್ವದಲ್ಲಿ ಕೆರೆಯಿಂದ ಹೊರತೆಗೆದ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕುಟುಂಬದ ಸದಸ್ಯರು ಹೇಳಿರುವ ದೂರಿನ ಅನ್ವಯ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತನಿಕೆ ನಡೆಸಲಾಗುವುದು ಎಂದರು.
ಎ.ಎಸ್.ಐ ಗಳಾದ ಬಸವರಾಜ್, ಪ್ರಸನ್ನ,ಸತೀಶ್ ನಾಯಕ್, ಪೋಲಿಸ್ ಸಿಬ್ಬಂದಿಗಳು ಇದ್ದರು


